ಮುಳಬಾಗಿಲು: ತಾಲೂಕು ಕಚೇರಿ ಎಡಿಎಲ್ಆರ್ ನಿವೇದಿತಾ ಜಮೀನೊಂದರ ದಾಖಲೆ ನೀಡಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಫಲಾನುಭವಿಯಿಂದ ಬುಧವಾರ 1.50 ಲಕ್ಷ ಹಣ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದಿದ್ದಾರೆ.
ಹೊಸಕೋಟೆ ತಾಲೂಕಿನ ನಾಗಸಂದ್ರ ಮೂಲದ ಬಿ.ಮಂಜುನಾಥ್ ಎಂಬುವವರು ಮುಳಬಾಗಿಲು ತಾಲೂಕಿನ ಕಪ್ಪಲಮಡಗು ಬಳಿ ಜಮೀನು ಖರೀದಿಸಿ ಅದರ ದಾಖಲೆ ಪಡೆಯಲು ಕೋಲಾರದ ಡಿಡಿಎಲ್ಆರ್ ಅಧಿಕಾರಿ ಸಂಜಯ್ ಅವರಿಗೆ ಮನವಿ ಮಾಡಿದ್ದರು. ಈ ಮೂಲಕ ಸಿಬ್ಬಂದಿ ಸಂದೀಪ್ ಮಾಹಿತಿ ರವಾನೆಗೊಂಡ ನಂತರ ಮುಳಬಾಗಿಲಿನ ಸರ್ವೇಯರ್ ಸಂತೋಷ್ ಮುಂದಾಳತ್ವದಲ್ಲಿ ಎಡಿಎಲ್ಆರ್ ನಿವೇದಿತಾ ಅವರು 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
ಅದರಂತೆ ಬಿ.ಮಂಜುನಾಥ್ ಅವರು ಬೆಂಗಳೂರಿನ ಹೊಟೇಲ್ ಒಂದರಲ್ಲಿ 50 ಸಾವಿರ ರೂಪಾಯಿಯನ್ನು ಮುಂಗಡವಾಗಿ ನೀಡಿದ್ದು, ಉಳಿದ 1.50 ಲಕ್ಷ ರೂಪಾಯಿಯನ್ನು ನೀಡಲು ಬುಧವಾರ ಕಚೇರಿಗೆ ಬಂದಿದ್ದಲ್ಲದೇ, ಈ ಬಗ್ಗೆ ಲೋಕಾ ಅಧಿಕಾರಿಗಳಿಗೂ ದೂರು ನೀಡಿದ್ದರು. ಬುಧವಾರ ಕಚೇರಿಯಲ್ಲಿ ಮಂಜುನಾಥ್ ಅವರು ಹಣ ನೀಡುತ್ತಿದ್ದಂತೆ ಲೋಕಾ ಅಧಿಕಾರಿಗಳು ಕಚೇರಿಗೆ ಬಂದಿದ್ದು, ಕೂಡಲೇ ಎಚ್ಚೆತ್ತುಕೊಂಡ ನಿವೇದಿತಾ ಕಚೇರಿಯಿಂದ ಹೊರಗೆ ಓಡಿ ಬಸ್ ನಿಲ್ದಾಣಕ್ಕೆ ಹೋಗಿದ್ದಾರೆ.
ಹಿಂದೆಯೇ ಹೋದ ಲೋಕಾಯುಕ್ತ ಅಧಿಕಾರಿಗಳು ನಿವೇದಿತಾ ಅವರನ್ನು ಪುನ@ ಕಚೇರಿಗೆ ಕರೆತಂದು ವಿಚಾರಣೆ ನಡೆಸಿ, ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಲಂಚಕ್ಕೆ ಬೇಡಿಕೆ ಆರೋಪದಲ್ಲಿ ಎಡಿಎಲ್ಆರ್ಎಸ್ ನಿವೇದಿತಾ ಸೇರಿ ಡಿಡಿಎಲ್ಆರ್ ಸಂಜಯ್, ಸರ್ವೇಯರ್ ಸಂತೋಷ್, ಸಂದೀಪ್ ಮೇಲೆ ಪ್ರಕರಣ ದಾಖಲಾಗಿದೆ.
ನೋಟಿಸ್ ಜಾರಿ: ಲೋಕಾಯುಕ್ತ ಅಧಿಕಾರಿಗಳು ತಾಲೂಕು ಕಚೇರಿಗೆ ಬಂದ ನಂತರ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಕಚೇರಿ ಬಿಟ್ಟು ಹೊರಗೆ ಹೋಗಿದ್ದು, ಕಚೇರಿ ಖಾಲಿಯಾಗಿತ್ತು. ಕೆಲವರ ದೂರವಾಣಿಗಳು ಸ್ವಿಚ್ಆಫ್ ಆಗಿದ್ದೂ ಕಂಡುಬಂದಿದ್ದು, ಅಂತವರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಲೋಕಾಯುಕ್ತ ಸರ್ಕಲ್ ಇನ್ಸ್ಪೆಕ್ಟರ್ ರೇಣುಕಾ ಮಾಹಿತಿ ನೀಡಿದರು. ಸಿಬ್ಬಂದಿ ಸುಬ್ರಹ್ಮಣಿ, ವಾಸುದೇವ್, ನಾಗಭೂಷಣ್, ಮುನಿರತ್ನ, ಶಿವಶಂಕರ್, ಶ್ರೀನಿವಾಸ್ ಇತರರು ಇದ್ದರು.