ಕೆಜಿಎಫ್: ಕಳೆದ ಜ.13 ರಂದು ಉಪ ಲೋಕಾಯುಕ್ತ ನ್ಯಾಯಾಧೀಶ ಬಿ.ವೀರಪ್ಪ ಅವರು ಸುಮಾರು 30 ಮಂದಿ ಲೋಕಾಯುಕ್ತ ಅಧಿಕಾರಿ ಮತ್ತು ಸಿಬ್ಬಂದಿ ತಂಡದೊಂದಿಗೆ ತಾಲೂಕು ಆಡಳಿತ ಭವನಕ್ಕೆ ಭೇಟಿ ನೀಡಿ 15 ದಿನ ಕಳೆಯುವ ಮುನ್ನವೇ ಕೋಲಾರ ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ ತಾಲೂಕು ಕಚೇರಿಯ ರೆಕಾರ್ಡ್ ರೂಂಗೆ ದಿಢೀರ್ ದಾಳಿ ನಡೆಸಿದ್ದು, ಹಿಂದಿನ ತಹಸೀಲ್ದಾರ್ ನಡೆಸಿದ್ದಾರೆ ಎನ್ನಲಾದ ಬಗರ್ಹುಕುಂ ಕಡತಗಳ ಶೋಧ ಕಾರ್ಯ ನಡೆಸಿದರು.
ಎರಡು ಬೊಲೆರೋ ವಾಹನಗಳಲ್ಲಿ ಬೆಳಗ್ಗೆ 11.30ಕ್ಕೆ ಬಂದ ಅಧಿಕಾರಿಗಳ ತಂಡ ಸಂಜೆಯವರೆಗೂ ಶೋಧ ನಡೆಸಿತು. ಅಕ್ರಮ ಮಂಜೂರಾತಿ ಮತ್ತು ಖಾತೆಗಳಿಗೆ ಸಂಬಂಧಿಸಿದ ಕಡತಗಳನ್ನು ಹುಡುಕಿಕೊಡುವಂತೆ ರೆಕಾರ್ಡ್ ರೂಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ತಹಸೀಲ್ದಾರ್ ಒಬ್ಬರು ಕೋಟ್ಯಾಂತರ ರೂಪಾಯಿ ಬೆಲೆಬಾಳುವ 523 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಅನರ್ಹ ಫಲಾನುಭವಿಗಳಿಗೆ ಮಂಜೂರು ಮಾಡಿ ಖಾತೆಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಕೋಲಾರ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಮೊದಲನೇ ಹಂತವಾಗಿ ಅಕ್ರಮವಾಗಿ ಮಂಜೂರು ಮಾಡಿರುವ ಸರ್ಕಾರಿ ಭೂಮಿಗೆ ಸಂಬಂಧಿಸಿದ ಕಡತಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ. ಕೆಜಿಎಫ್ ತಾಲೂಕಿನ ಈ ಹಿಂದಿನ ತಹಸೀಲ್ದಾರ್ ಕೆ.ಎನ್.ಸುಜಾತಾ, ಶಿರಸ್ತೇದಾರ್ ಕೆ.ಸಿ.ಸುರೇಶ್, ದ್ವೀತಿಯ ದರ್ಜೆ ಸಹಾಯಕ ಆರ್.ಪವನ್ಕುಮಾರ್ ವಿರುದ್ದ ಲೋಕಾಯುಕ್ತ ಪೊಲೀಸರು ಕರ್ನಾಟಕ ಲೋಕಾಯುಕ್ತ ಮಹಾನಿರೀಕ್ಷಕರ ಅನುಮತಿ ಪಡೆದು ಜ.1 ರಂದು ಕಲಂ, 409, 420, 465, 468, 471 ರ/ವಿ 120(ಬಿ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಕೆಜಿಎಫ್ ತಾಲೂಕಿನಲ್ಲಿ ಅನಧಿಕೃತವಾಗಿ ಖಾತೆಗಳನ್ನು ಮಾಡಿದ್ದು, 1964 ರ ಕಲಂ 94ಎ, 54ಬಿ, ಮತ್ತು 94ಎ(4) ನಮೂನೆ&50, 53 ಮತ್ತು 57 ರ ಅಡಿ ಸ್ವೀಕರಿಸಿರುವ ಅರ್ಜಿಗಳಲ್ಲಿ ನಗರಸಭೆ ಸರಹದ್ದಿನಿಂದ 7 ಕಿಲೋ ಮೀಟರ್ ಅಂತರದೊಳಗೆ ಬರುವ ಸರ್ಕಾರಿ ಭೂಮಿಯನ್ನು ಮಂಜೂರು ಮಾಡುವಂತಿಲ್ಲ. ಒಂದು ವೇಳೆ ಮಂಜೂರು ಮಾಡಿದ್ದಲ್ಲಿ ಅಂತಹ ಜಮೀನುಗಳನ್ನು ರದ್ದುಗೊಳಿಸಲು ಸರ್ಕಾರದ ಆದೇಶವಿದ್ದರೂ ಲೆಕ್ಕಿಸದೇ 523 ಎಕರೆ ಸರ್ಕಾರಿ ಭೂಮಿಯನ್ನು 229 ಅನರ್ಹ ಫಲಾನುಭವಿಗಳಿಗೆ ಅಕ್ರಮವಾಗಿ ಮಂಜೂರು ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 15.69 ಕೋಟಿ ರೂ ನಷ್ಟ ಉಂಟಾಗಿರುವುದಾಗಿ ಲೋಕಾಯುಕ್ತ ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಅಧಿಕಾರಿ ಪ್ರಶ್ನೆಗೆ ಕಾಲ್ಕಿತ್ತ ಚಂದ್ರು!
ಲೋಕಾ ಯುಕ್ತ ಅಧಿಕಾರಿಗಳು ರೆಕಾರ್ಡ್ ರೂಂಗೆ ದಾಳಿ ನಡೆಸಿದಾಗ ಎಲ್ಎನ್ಡಿ ವಿಷಯ ನಿರ್ವಾಹಕ ಚಂದ್ರು ಅನುಮತಿ ಇಲ್ಲದೆ ರೆಕಾರ್ಡ್ ರೂಂಗೆ ಪ್ರವೇಶ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದನ್ನು ಕಂಡ ಅಧಿಕಾರಿಗಳು ತೀವ್ರ ತರಾಟೆಗೆ ತೆಗೆದುಕೊಂಡರು. ಇಲ್ಲಿ ನಿಮಗೆ ಏನು ಕೆಲಸ?, ಇಲ್ಲಿಗೆ ಬರಲು ನಿಮಗೆ ಅನುಮತಿ ನೀಡಿದವರು ಯಾರು?, ರೆಕಾರ್ಡ್ ರೂಂ ಒಳಗಡೆ ಮೊಬೈಲ್ ತೆಗೆದುಕೊಂಡು ಬರಲು ಅನುಮತಿ ನೀಡಿದವರು ಯಾರು?, ಅನುಮತಿ ಇಲ್ಲದೆ ರೆಕಾರ್ಡ್ ರೂಂ ಬರಲು ನಿಮಗೆ ಅವಕಾಶವಿದೇಯೇ? ಎಂದು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಂತೆ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೇ ಕ್ಷಣಾರ್ದದಲ್ಲೇ ಚಂದ್ರು ಕಾಲ್ಕಿತ್ತರು ಎನ್ನಲಾಗಿದೆ.