ದೂರವಾಗಿದ್ದ ದಂಪತಿಗಳು ಮತ್ತೆ ಒಂದಾದರು

HUN-DEC-14-1(LOK ADALATH)
ಹುಣಸೂರು ನ್ಯಾಯಾಲಯದಲ್ಲಿ ಆಯೋಜಿಸಿದ್ದ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ದೂರವಾಗಿದ್ದ ಎರಡು ಜೋಡಿಗಳು ನ್ಯಾಯಾಧೀಶರ ಮನವೊಲಿಕೆ ನಂತರ ಒಂದಾದರು. ಟಿ.ಗೋವಿಂದಯ್ಯ, ಜೈಬುನ್ನಿಸ, ಪೂಜಾ ಬೆಳಕೇರಿ, ಅನಿತಾ, ಸೌಮ್ಯಾ, ಅನಿತಾ, ಪಾರ್ವತಿ ಇತರರಿದ್ದರು.
Published on

ಹುಣಸೂರು: ಪುತ್ರನ ನಾಮಕರಣಕ್ಕೆ ತನ್ನನ್ನೇ ಆಮಂತ್ರಿಸಲಿಲ್ಲ. ಅಲ್ಲದೆ ಮಗನಿಗಿಟ್ಟ ಹೆಸರು ಕೂಡ ತನಗೆ ಇಷ್ಟವಾಗಲಿಲ್ಲವೆಂದು ಕೋಪಗೊಂಡ ಪತಿ ದೂರ ಹೋದ ನಂತರ ಜೀವನಾಂಶಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ಪತ್ನಿಯ ಪ್ರಕರಣ ಒಂದೆಡೆಯಾದರೆ, 15 ವರ್ಷ ಬಾಳುವೆ ನಡೆಸಿದ ನಂತರ ಸತಿ-ಪತಿ ಮಧ್ಯೆ ಹೊಂದಾಣಿಕೆ ಕಾಣದೆ ವಿಚ್ಛೇದನೆ ಬೇಡಿ ಬಂದ ದಂಪತಿ ಮತ್ತೊಂದೆಡೆ.

ನ್ಯಾಯಾಲಯ ಎರಡೂ ಜೋಡಿಗಳನ್ನು ಸಮಾಧಾನಿಸಿ ಮತ್ತೆ ಒಂದಾಗಿಸುವ ಮೂಲಕ ಸುಖಾಂತ್ಯ ಕಂಡಿದೆ. ಜತೆಗೆ ನ್ಯಾಯಾಲಯದಲ್ಲೇ ನಾಮಕರಣವೂ ನಡೆಯಿತು.

ನಗರದ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಲೋಕ ಅದಾಲತ್‌ನಲ್ಲಿ ಕಂಡು ಬಂದ ದೃಶ್ಯವಿದು. ನ್ಯಾಯಕ್ಕಾಗಿ ಬಂದ ದಂಪತಿಯ ಕಷ್ಟ-ಸುಖ ಆಲಿಸಿ, ತಪ್ಪು-ಒಪ್ಪುಗಳನ್ನು ತಿಳಿಸಿ ಒಂದಾಗಿ ಬಾಳುವಂತೆ ನ್ಯಾಯಾಧೀಶರ ತಂಡ ತಿಳಿಹೇಳಿದೆ.

ಅಶ್ವಿನಿ-ದಿವಾಕರ್ ದಂಪತಿಗೆ ವರ್ಷದ ಪುತ್ರನಿದ್ದಾನೆ. ಪುತ್ರನ ನಾಮಕರಣ ಶಾಸ್ತ್ರಕ್ಕೆ ಪತಿ ದಿವಾಕರನಿಗೆ ಸಂಪ್ರದಾಯಬದ್ಧವಾಗಿ ಆಹ್ವಾನ ನೀಡಲಿಲ್ಲವೆಂದು ಕ್ಯಾತೆ ತೆಗೆದ ಪತಿರಾಯ, ಪತ್ನಿಯಿಂದ ಹಲವು ತಿಂಗಳು ದೂರಾಗಿದ್ದ. ಮದುವೆಯಾದ ನಂತರ ಸಮಾಧಾನದಿಂದ ಬದುಕು ನಡೆಸಲು ಆಗುತ್ತಿಲ್ಲವೆಂದು ಆರೋಪಿಸಿ, ಪತ್ನಿ ಅಶ್ವಿನಿ ಕೌಟುಂಬಿಕ ಕಲಹ ಪ್ರಕರಣ ದಾಖಲಿಸಿ ಜೀವನಾಂಶಕ್ಕಾಗಿ ನ್ಯಾಯಾಲಯದ ಮುಂದೆ ಬೇಡಿಕೆ ಇಟ್ಟಳು. ಕಳೆದ ನಾಲ್ಕು ತಿಂಗಳಿಂದ ಪ್ರಕರಣದ ನ್ಯಾಯಾಲಯದಲ್ಲಿ ನಡೆದಿತ್ತು.

ಲೋಕ ಅದಾಲತ್‌ನಲ್ಲಿ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಗೋವಿಂದಯ್ಯ ಅವರ ಸಮ್ಮುಖದಲ್ಲಿ ಸೇರಿದ್ದ ಎಲ್ಲ ನ್ಯಾಯಾಧೀಶರು, ಸತಿ-ಪತಿಯ ಸಮಸ್ಯೆ ಕುರಿತು ಮಾಹಿತಿ ಪಡೆದರು. ಪತಿ ದಿವಾಕರ್ ನಾಮಕರಣದ ದಿನ ನನ್ನನ್ನು ಕರೆಯದೆ ಆರ್ ಎಂದು ಹೆಸರಿಟ್ದದ್ದಾರೆ. ನನಗೆ ಮಗನ ಹೆಸರು ಕೂಡ ಹಿಡಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ. ಹಿಂದೆ ಆದದ್ದೆಲ್ಲ ಮರೆತು ಒಂದಾಗಿ ಬಾಳೋಣ ಎಂದು ನಾನು ಕೇಳಿಕೊಂಡರೂ ಇವರು ಕೇಳುತ್ತಿಲ್ಲ ಎಂದು ಅಳಲು ತೋಡಿಕೊಂಡ. ಸಮಾಧಾನಿಸಿದ ನ್ಯಾಯಾಧೀಶರ ತಂಡ, ಇಬ್ಬರಿಗೂ ಸಮಾಧಾನ ತರುವ ಹೆಸರು ಇಡೋಣ ಎಂದು ಚರ್ಚಿಸಿ ಆರ್ಯವರ್ಧನ ಎಂದು ಹೆಸರನ್ನು ಎಪಿಪಿ ಸೌಮ್ಯಾ ಸೂಚಿಸಿದಾಗ ದಂಪತಿ ಒಪ್ಪಿಕೊಂಡರು. ಇಬ್ಬರೂ ನ್ಯಾಯಾಧೀಶರು ತಿಳಿಸಿದಂತೆ ಒಂದಾಗಿ ಬಾಳುತ್ತೇವೆಂದು ಒಪ್ಪಿ ಹಾರ ಬದಲಿಸಿಕೊಂಡು ಸಿಹಿ ತಿಂದರು.

ಅದಾಲತ್‌ನಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶೆ ಜೈಬುನ್ನಿಸ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಧೀಶೆ ಅನಿತಾ, ಹೆಚ್ಚುವರಿ ಸಿವಿಲ್ ನ್ಯಾಯಧೀಶೆ ಪೂಜಾ ಬೆಳಕೇರಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಸೌಲ್ಯಾ, ಅನಿತಾ, ಪಾರ್ವತಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಶಿವಣ್ಣೇಗೌಡ, ಪ್ರಧಾನ ಕಾರ್ಯದರ್ಶಿ ಹರೀಶ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net