

ಕೊಪ್ಪಳ: ರಾಷ್ಟ್ರೀಯ ಲೋಕ ಅದಾಲತ್ ಮೂಲಕ ರಾಜೀ ಆಗಬಹುದಾದ ಪ್ರಕರಣಗಳನ್ನು ಇತ್ಯರ್ಥಪಡಿಸಬಹುದು. ಇದಕ್ಕೆ ವಿವಿಧ ಇಲಾಖೆಗಳ ಸಹಕಾರವೂ ಅಗತ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್.ದರಗದ ಹೇಳಿದರು.
ಸೆ. 14ರ ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಜಿಲ್ಲಾ ನ್ಯಾಯಾಲಯದ ಕಾನೂನುಸೇವಾ ಪ್ರಾಧಿಕಾರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಚಾಲ್ತಿ ಹಾಗೂ ನ್ಯಾಯಾಲಯಕ್ಕೆ ದಾಖಲಾಗದೇ ಇರುವ ಪ್ರಕರಣಗಳನ್ನು ರಾಜೀ ಸಂಧಾನ ಮೂಲಕ ಪರಿಹರಿಸಲಾಗುವುದು. ಅಪಘಾತ, ಅದಲು ದಾವೆ, ಬ್ಯಾಂಕ್ ಪ್ರಕರಣ, ಭೂಸ್ವಾಧಿನ, ವೈವಾಹಿಕ, ಜೀವನಾಂಶ, ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ ಹಾಗೂ ರಾಜೀ ಆಗಬಹುದಾದ ಇತರ ಪ್ರಕರಣಗಳನ್ನು ಪರಿಹರಿಸಲಾಗುವುದು. ಬ್ಯಾಂಕ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಅಬಕಾರಿ, ಕಾರ್ಮಿಕ, ಸಾರಿಗೆ, ಜೆಸ್ಕಾಂ ಹಾಗೂ ಇತರ ಇಲಾಖೆಗಳು ಅದಾಲತ್ ಗೆ ಸಹಕರಿಸಬೇಕು. ಪ್ರಕರಣ ಬಗೆಹರಿವ ಜತೆಗೆ, ಸರ್ಕಾರಕ್ಕೂ ಆದಾಯ ಬರಲಿದೆ. ಸೆ.14ಕ್ಕೆ ಜಿಲ್ಲಾದ್ಯಂತ ನಡೆವ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರಕರಣಗಳ ಇತ್ಯರ್ಥಕ್ಕೆ ಕೈ ಜೋಡಿಸುವಂತೆ ತಿಳಿಸಿದರು.
ಅದಾಲತ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಸ್ ನಿಲ್ದಾಣ, ನಗರ, ಸ್ಥಳಿಯ ಸಂಸ್ಥೆಗಳು ತಮ್ಮ ಕಸ ವಿಲೇವಾರಿ ವಾಹನಗಳ ಮೂಲಕ ಪ್ರಚಾರ ಮಾಡಿ. ರಾಜೀ ಆಗಬಹುದಾದ ಎಲ್ಲಾ ತರಹದ ಪ್ರಕರಣಗಳನ್ನು ಬಾಕಿ ಉಳಿಸದೆ ಇತ್ಯರ್ಥಪಡಿಸಲು ಸಹಕರಿಸಿ. ಜತೆಗೆ ಎಂದು ವಿವಿಧ ಇಲಾಖೆಗಳ ಮೂಲಕ ಸಾರ್ವಜನಿಕರಿಗೆ ಇರುವ ಸೌಲಭ್ಯಗಳು, ಸೇವೆಗಳು ಸಕಾಲಕ್ಕೆ ಸಿಗುವಂತಾಗಲಿ. ನಿಮ್ಮ ಇಲಾಖೆಗಳ ಯೋಜನೆ, ಕಾರ್ಯಕ್ರಗಳ ಕುರಿತು ಹೆಚ್ಚಿನ ಅರಿವು ಮೂಡಿಸಿ.ಅರ್ಹರಿಗೆ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ವಿವಿಧ ಇಲಾಖೆ ಅಧಿಕಾರಿಗಳಿದ್ದರು.