

ಜಿಲ್ಲೆ ವಿವಿಧೆಡೆ ನಕಾರಾತ್ಮಕ ಕೂಗು. ಮೂಲ ಸೌಕರ್ಯ ಒದಗಿಸಲು ಜನಾಗ್ರಹ. ಮುಂದುವರಿದ ಮನವೊಲಿಕೆ
ಪ್ರಶಾಂತ ಹೂಗಾರ ಬೆಳಗಾವಿ
ನೂರಕ್ಕೆ ನೂರರಷ್ಟು ಮತದಾನ ಮಾಡಿಸಲು ಚುನಾವಣಾ ಆಯೋಗ ಶತಾಯಗತಾಯ ಪ್ರಯತ್ನ ಮಾಡುತ್ತಿದ್ದರೆ ಇತ್ತ ಮೂಲ ಸೌಕರ್ಯ ಕೊರತೆಯಿಂದ ಬಾಧಿತ ವಿವಿಧ ಗ್ರಾಮಗಳ ಜನರು ಮತದಾನವನ್ನೇ ಬಹಿಷ್ಕರಿಸುವ ಎಚ್ಚರಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ತಮ್ಮ ಗ್ರಾಮಗಳನ್ನು ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಮಾಡುತ್ತಿರುವ ಹಲವು ಗ್ರಾಮಸ್ಥರು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡುತ್ತಿದ್ದಾರೆ. ರಸ್ತೆ, ಚರಂಡಿ, ವಿದ್ಯುತ್, ನೀರು, ಮನೆ, ಶಾಲೆ, ಕಾಲೇಜು, ಆಸ್ಪತ್ರೆ, ಅಧಿಕಾರಿ, ವೈದ್ಯರು, ಸಿಬ್ಬಂದಿ, ಪಶು ಆಸ್ಪತ್ರೆ, ಆಟದ ಮೈದಾನ, ಸೇತುವೆ, ಶೌಚಗೃಹ, ನಿವೇಶನ ಹಕ್ಕುಪತ್ರ ಸೇರಿ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸುತ್ತಿದ್ದಾರೆ.
ನೀತಿ ಸಂಹಿತೆ ಘೋಷಣೆಯಾದಾಗಿನಿಂದ ಇಲ್ಲಿಯವರೆಗೂ ಮತದಾನ ಬಹಿಷ್ಕಾರದ ಕೂಗು ಜಿಲ್ಲೆಯಲ್ಲಿ ಒಂದಿಲ್ಲೊಂದು ಕಡೆ ಕೇಳಿಬರುತ್ತಿದೆ. ಇತ್ತ ಅಧಿಕಾರಿಗಳಿಗೆ ಚುನಾವಣೆ ಕೆಲಸದೊಟ್ಟಿಗೆ ಬಹಿಷ್ಕಾರದ ಕೂಗು ಹಾಕಿದವರನ್ನು ಮನವೊಲಿಸುವುದು ತಲೆನೋವು ತಂದಿದೆ.
ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ದಡ್ಡಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ನಿಲ್ಲಿಸುವಂತೆ, ಕೃಷ್ಣಾ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಹುಲಗಬಾಳಿ ಗ್ರಾಮಸ್ಥರು, ರಸ್ತೆ, ವಿದ್ಯುತ್, ನೀರು, ಸಾರಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರ, ನೆಟವರ್ಕ್ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಸವದತ್ತಿ ತಾಲೂಕಿನ ಮಳಗಲಿ ಗ್ರಾಮಸ್ಥರು, ಸರ್ಕಾರಿ ಶಾಲೆಗೆ ಕ್ರೀಡಾ ಮೈದಾನ ಒದಗಿಸುವಂತೆ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮಸ್ಥರು ಹಾಗೂ ಸಮರ್ಪಕ ರಸ್ತೆ, ಶುದ್ಧ ಕುಡಿಯುವ ನೀರು ಪೂರೈಸುವಂತೆ ಬಾಡಗಿ ಗ್ರಾಮದ ವಿವಿಧ ತೋಟದ ನಿವಾಸಿಗಳು, ಕಾಡಾನೆ ಗಡಿಪಾರು ಹಾಗೂ ಬೆಳೆನಾಶಕ್ಕೆ ಪರಿಹಾರ ಒದಗಿಸುವಂತೆ ಖಾನಾಪುರ ತಾಲೂಕಿನ ಕಬನಾಳಿ ನಿವಾಸಿಗಳು, ಜನ-ಜಾನುವಾರುಗಳಿಗೆ ನೀರು ಹಾಗೂ ಮೂಲಸೌಕರ್ಯ ಒದಗಿಸುವಂತೆ ಕಬ್ಬೂರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆಂಚನಟ್ಟಿ ಗ್ರಾಮಸ್ಥರು. ಗ್ರಾಮಕ್ಕೆ ರಸ್ತೆ, ಸಮರ್ಪಕ ಬಸ್ ಸೌಲಭ್ಯ ನೀಡುವಂತೆ ಆಗ್ರಹಿಸಿ ಬೈಲಹೊಂಗಲ ತಾಲೂಕಿನ ಹಿರೇಬೆಳ್ಳಿಕಟ್ಟಿ ಗ್ರಾಮಸ್ಥರು ಸೇರಿ ಹಲವು ಗ್ರಾಮದ ಜನರು ವಿವಿಧ ಬೇಡಿಕೆ ಮುಂದಿಟ್ಟು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ಚುನಾಯಿತ ಪ್ರತಿನಿಧಿಗಳಿಗೂ ಕ್ಲಾಸ್ : ಗ್ರಾಮಕ್ಕೆ ಸಮರ್ಪಕ ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ. ಭರವಸೆಯಂತೆ ಯಾವೊಂದು ಕೆಲಸವನ್ನೂ ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮ ಗ್ರಾಮ ನೆನಪಾಗುತ್ತದೆ. ಬಳಿಕ ಯಾವೊಬ್ಬ ಜನಪ್ರತಿನಿಧಿ ಇತ್ತ ತಲೆಹಾಕುವುದಿಲ್ಲ ಎಂದು ಜಿಲ್ಲೆಯ ಕೆಲವೆಡೆ ಪ್ರಚಾರಕ್ಕೆ ತೆರಳಿದ ರಾಜಕೀಯ ಮುಖಂಡರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಪ್ರಸಂಗಗಳು ನಡೆದಿವೆ.
ಅಧಿಕಾರಿಗಳಿಂದ ನಿರಂತರ ಮತ ಜಾಗೃತಿ: ಮತ ಚಲಾವಣೆ ಪ್ರತಿ ಪ್ರಜೆಯ ಹಕ್ಕಾಗಿದೆ. ಪ್ರಜಾಪ್ರಭುತ್ವ ಹಾಗೂ ದೇಶದ ಹಿತಕ್ಕಾಗಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಮತದಾನದಿಂದ ಯಾರು ವಂಚಿತರಾಗಬಾರದು ಎಂಬ ಉದ್ದೇಶದಿಂದ ಜಿಲ್ಲಾದ್ಯಂತ ಈಗಾಗಲೇ ಅಧಿಕಾರಿಗಳು ಮತದಾನದ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅದರೊಟ್ಟಿಗೆ ಅಭಿವೃದ್ಧಿ ಹಾಗೂ ವಿವಿಧ ಬೇಡಿಕೆಗಳ ಸರಮಾಲೆಯನ್ನು ಮುಂದಿಟ್ಟುಕೊಂಡು ಮತದಾನ ಬಹಿಷ್ಕರಿಸುವ ಕೂಗು ಕೇಳಿ ಬಂದಲ್ಲೆಲ್ಲ ಸಂಬಂಧಪಟ್ಟ ಅಧಿಕಾರಿಗಳ ತಂಡ ದೌಡಾಯಿಸಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.
ಜಿಲ್ಲೆಯಲ್ಲಿ ಮತದಾನ ಬಹಿಷ್ಕರಿಸುವ ಪ್ರಕರಣಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಬಹಿಷ್ಕಾರದ ಕೂಗು ಕೇಳಿ ಬಂದಲ್ಲಿ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿದ್ದಾರೆ. ಮತದಾನ ಪ್ರತಿ ಪ್ರಜೆಯ ಹಕ್ಕಾಗಿದ್ದು, ತಪ್ಪದೆ ಹಕ್ಕು ಚಲಾಯಿಸುವಂತೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ.ನಿತೇಶ ಪಾಟೀಲ ಜಿಲ್ಲಾಧಿಕಾರಿ, ಬೆಳಗಾವಿ