

ಸದೇಶ್ ಕಾರ್ಮಾಡ್ ಮೈಸೂರು
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೈಸೂರು ರಾಜಮನೆತನದವರು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಥಮ ಪ್ರಯತ್ನದಲ್ಲಿಯೇ ಗೆಲುವು ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಮೈಸೂರು ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 1984, 1989, 1996 ಹಾಗೂ 1999 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸರ್ಧಿಸಿ ಗೆಲುವು ಸಾಧಿಸಿದ್ದರು. 1991ರ ಚುನಾವಣೆಯಲ್ಲಿ ಪಕ್ಷ ಬದಲಾಯಿಸಿ ಬಿಜೆಪಿಯಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅದೃಷ್ಟ ಪರೀಕ್ಷೆಗೆ ಮುಂದಾದರು. ಆದರೆ, ಆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಪುತ್ರಿ ಚಂದ್ರಪ್ರಭಾ ಅರಸ್ ಎದುರು ಒಡೆಯರ್‌ಗೆ ಸೋಲುಂಟಾಯಿತು. ಆ ನಂತರ ಕಾಂಗ್ರೆಸ್‌ಗೆ ಮರಳಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 1996 ಹಾಗೂ 1999ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊನೆಯ ಚುನಾವಣೆ ಎದುರಿಸಿದ ಒಡೆಯರ್ ಬಿಜೆಪಿಯ ಸಿ.ಎಚ್. ವಿಜಯಶಂಕರ್ ಎದುರು ಸೋಲಿನ ಕಹಿ ಅನುಭವಿಸಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಚ್ಚು ಗೆಲುವನ್ನು ಕಂಡರು. ಆದರೆ, ಅವರಿಗೆ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಈ ಕೊರತೆಯನ್ನು ಈ ಬಾರಿ ಯದುವೀರ್ ನೀಗಿಸಿದ್ದಾರೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಕೀಯ ರಂಗ ಪ್ರವೇಶಿಸುವ ಕುರಿತು ಕೆಲವು ವರ್ಷಗಳಿಂದ ಚರ್ಚೆ ನಡೆಯುತಿತ್ತು. ಆದರೆ, ಅವರು ಎಲ್ಲೂ ಸಹ ಈ ಕುರಿತು ಸ್ಪಷ್ಟ ತೀರ್ಮಾನ ಪ್ರಕಟಿಸಿರಲಿಲ್ಲ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಂತಿಮ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಮೂಲಕ ಅಚ್ಚರಿ ಮೂಡಿಸಿದರು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಥಮ ಪ್ರಯತ್ನದಲ್ಲಿಯೇ ಗೆಲುವು ಸಾಧಿಸಿದ ಯದುವೀರ್ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಪ್ರಥಮ ರಾಜಮನೆತನದ ವ್ಯಕ್ತಿ ಎಂಬ ಹೆಗ್ಗಳಿಗೆ ಪಾತ್ರರಾದರು.
ಮೈಸೂರು ಲೋಕಸಭಾ ಕ್ಷೇತ್ರಕ್ಕೆ 1952ರಿಂದ ಇದುವರೆಗೆ ಒಟ್ಟು 18 ಚುನಾವಣೆಗಳು ನಡೆದಿದೆ. ಈ ಪೈಕಿ 13 ಬಾರಿ ಕಾಂಗ್ರೆಸ್, 5 ಬಾರಿ ಬಿಜೆಪಿ ಹಾಗೂ 1 ಬಾರಿ ಕಿಸಾನ್ ಮಜ್ದೂರ್ ಪಕ್ಷ ಗೆಲುವು ಸಾಧಿಸಿದೆ (1952ರಲ್ಲಿ ಮೈಸೂರು ದ್ವಿ ಸದಸ್ಯ ಕ್ಷೇತ್ರವಾಗಿದ್ದ ಸಂದರ್ಭ ಕಾಂಗ್ರೆಸ್‌ನ ಎನ್. ರಾಚಯ್ಯ, ಕಿಸಾನ್ ಮಜ್ದೂರ್ ಪಕ್ಷದ ಎಂ.ಎಸ್. ಗುರುಪಾದಸ್ವಾಮಿ ಗೆಲುವು ಸಾಧಿಸಿದ್ದರು).
ಬಿಜೆಪಿಯ ಸಿ.ಎಚ್. ವಿಜಯಶಂಕರ್ 1998ರಲ್ಲಿ ಕಾಂಗ್ರೆಸ್‌ನ ಎಸ್. ಚಿಕ್ಕಮಾದು ವಿರುದ್ಧ ಗೆಲುವು ಸಾಧಿಸಿ ಬಿಜೆಪಿಗೆ ಕ್ಷೇತ್ರದಲ್ಲಿ ಮೊದಲ ಗೆಲುವು ತಂದುಕೊಟ್ಟರು. ಅದಾದ ನಂತರ ಸಿ.ಎಚ್. ವಿಜಯಶಂಕರ್ 2004ರ ಚುನಾವಣೆಯಲ್ಲಿ ಜೆಡಿಎಸ್‌ನ ಎ.ಎಸ್. ಗುರುಸ್ವಾಮಿ ವಿರುದ್ಧ ಗೆಲುವು ಸಾಧಿಸಿ ಬಿಜೆಪಿಗೆ 2ನೇ ಗೆಲುವು ತಂದುಕೊಟ್ಟರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ 2014ರ ಲೋಕಸಭಾ ಚುನಾವಣೆಯಲ್ಲಿ ದಿಢೀರಾಗಿ ರಾಜಕೀಯ ರಂಗ ಪ್ರವೇಶಿಸಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲಿಯೇ ಕಾಂಗ್ರೆಸ್‌ನ ಸಿ.ಎಚ್. ವಿಜಯಶಂಕರ್ ಎದುರು ಗೆಲುವು ಸಾಧಿಸಿದರು. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಎದುರು ಗೆಲುವು ಸಾಧಿಸಿದರು. 2024ರ ಚುನಾವಣೆಯಲ್ಲಿ ಯದುವೀರ್ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಸೇರಿದಂತೆ ಒಟ್ಟು 5 ಬಾರಿ ಗೆಲುವು ದಾಖಲಿಸಿದೆ. 2014 ರಿಂದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಈ ಕೋಟೆಯನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ವಿರುದ್ಧ 1,39,262 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದರೂ ಯದುವೀರ್ ಅವರ ರಾಜಕೀಯ ಹಾದಿ ಸುಲಭವಾಗಿ ಇರಲಿಲ್ಲ. ಹಾಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಈ ಬಾರಿ ಕೈಬಿಟ್ಟು ಯದುವೀರ್‌ಗೆ ಟಿಕೆಟ್ ನೀಡಲಾಯಿತು. ಇದು ಪ್ರತಾಪ್ ಸಿಂಹ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಯಿತು. ಬಿಜೆಪಿ ವರಿಷ್ಠರು ಪ್ರತಾಪ್ ಸಿಂಹ ಹಾಗೂ ಬೆಂಬಲಿಗರ ಮನವೊಲಿಸುವಲ್ಲಿ ಯಶಸ್ವಿಯಾದರು. ಅರಮನೆಯಲ್ಲಿರುವ ಯದುವೀರ್ ಬೀದಿಗೆ ಬಂದು ಕೆಲಸ ಮಾಡುತ್ತಾರಾ? ಬಿಜೆಪಿ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸುತ್ತಾರಾ? ಬಿಜೆಪಿ ನಡೆಸುವ ಪ್ರತಿಭಟನೆಯ ನಾಯಕತ್ವ ವಹಿಸುತ್ತಾರಾ ಎಂಬ ಟೀಕೆಗಳು ವ್ಯಕ್ತವಾಗಿತ್ತು. ಆ ಎಲ್ಲ ಟೀಕೆಗಳಿಗೆ ಯದುವೀರ್ ಚುನಾವಣೆಯಲ್ಲಿಯೇ ದಿಟ್ಟವಾದ ಉತ್ತರ ನೀಡಿದರು. ಪ್ರತಾಪ್ ಸಿಂಹ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದವರು ಅಸಮಾಧಾನಗೊಂಡು ಕಾಂಗ್ರೆಸ್‌ನ ಎಂ. ಲಕ್ಷ್ಮಣ್ ಅವರಿಗೆ ಮತ ಚಲಾಯಿಸುತ್ತಾರೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರವಾಗಿತ್ತು. ಈ ವಿವಾರವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣಾ ಪ್ರಚಾರ ನಡೆಸಿದರೂ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್ ವಿಫಲವಾಯಿತು.