ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ

Lok Sabha Elections Minister Chaluvarayaswamy speech mandya
Published on

ನಾಗಮಂಗಲ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾನ ಕಾಂಗ್ರೆಸ್ ಪರ ಇದೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಇಜ್ಜಲಘಟ್ಟ ಗ್ರಾಮದಲ್ಲಿ ಶುಕ್ರವಾರ ಮತಚಲಾಯಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪರವಾಗಿ ಮಹಿಳೆಯರ ಮತ ಹೆಚ್ಚಿದೆ. ಆದ್ದರಿಂದ ನಮಗೆ ಪಾಸಿಟಿವಾಗಿ ಕಾಣುತ್ತಿದೆ. ಶೇ.100ರಷ್ಟು ನಾವೇ ಗೆಲ್ಲುತ್ತೇವೆ. ಅಂತರ ಡಿಸೈಡ್ ಮಾಡುವುದು ಜನರಿಗೆ ಬಿಟ್ಟಿದ್ದು. ಓಪನ್ ಆಗಿ ನಿರ್ಧಾರ ಮಾಡಿ ಕಾಂಗ್ರೆಸ್ ಗೆಲ್ಲಿಸುವ ಬಗ್ಗೆ ಜನಾಭಿಪ್ರಾಯ ಇದೆ. ನಮ್ಮ ಸರ್ಕಾರದ ಗ್ಯಾರಂಟಿ ಮೇಲೆ ಜನರು ವಿಶ್ವಾಸ ಇದೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಗ್ಯಾರಂಟಿ ನಿಲ್ಲಿಸುವ ಬಗ್ಗೆ ಹೇಳಿದ್ದಾರೆ. ಗ್ಯಾರಂಟಿ ಕೊಡುವುದು ತಪ್ಪು, ಮಹಿಳೆಯರು ದಾರಿ ತಪ್ಪಿದ್ದಾರೆಂದು ಹೇಳಿದ್ದಾರೆ. ಎಚ್‌ಡಿಕೆ ಸಿಎಂ ಆಗಿದ್ದಾಗ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಮಂಡ್ಯ ಜಿಲ್ಲೆಗೆ ಒಂದು ಶಾಶ್ವತ ಯೋಜನೆ ಕೊಟ್ಟಿಲ್ಲ. ಅವರ ತಂದೆ ಕೂಡ ಸಿಎಂ, ಅವರು ಸಿಎಂ ಆಗಿದರೂ ಏನು ಮಾಡಿಲ್ಲ. ಹಾಸನ ಸಾಕಷ್ಟು ಅಭಿವೃದ್ಧಿ ಮಾಡಿದರು. ಆದರೆ ಮಂಡ್ಯ, ತುಮಕೂರಿನ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡುತ್ತಾರೆ ಅಷ್ಟೆ. ವೈಯಕ್ತಿಕವಾಗಿ ಮಂಡ್ಯ ಜಿಲ್ಲೆಗೆ ಕೊಡುಗೆ ಶೂನ್ಯ ಎಂದು ವಾಗ್ದಾಳಿ ನಡೆಸಿದರು.

ಒಕ್ಕಲಿಗರ ನಾಯಕ ನಾನೇ ಎಂದು ಹೇಳಿಕೊಳ್ಳುತ್ತಾರೆ. ಆದರೆ ಏನು ಮಾಡಿಲ್ಲ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕುಮಾರಸ್ವಾಮಿ ಹೇಳಿದಂತೆ ಕೇಳುತ್ತಾರೆ, ಕುಮಾರಸ್ವಾಮಿ ದೇವೇಗೌಡರು ಹೇಳಿದಂತೆ ಕೇಳುತ್ತಾರೆ. ನೀರಾವರಿ ಯೋಜನೆಗೆ ಇವರು ಒತ್ತು ಕೊಟ್ಟಿಲ್ಲ. ನಾವು ಕೃಷಿ ವಿಶ್ವವಿದ್ಯಾನಿಲಯ ಮಾಡಿದ್ದೇವೆ. ಮೆಡಿಕಲ್ ಕಾಲೇಜು ಮಾಡಿದ್ದೀವಿ. ಕಾವೇರಿ ಸಮಸ್ಯೆ ಸರಿಪಡಿಸುತ್ತೇನೆ ಎಂದು ಎಚ್‌ಡಿಕೆ ಹೇಳುತ್ತಾರೆ. ಇದನ್ನು ನೋಡಿದರೆ ಬೇಸರ ಆಗುತ್ತದೆ. ಅವರು ಇಷ್ಟೊಂದು ಸುಳ್ಳು ಹೇಳುತ್ತಾರೆಂದು ಬೇಸರ ಆಗುತ್ತದೆ. ಕಾವೇರಿ ವಿಷಯದಲ್ಲಿ ದೇವೇಗೌಡ ಅವರ ಪ್ರಯತ್ನ ಮಾಡಿದರೂ ನ್ಯಾಯ ಸಿಕ್ಕಿಲ್ಲ. ಎಲ್ಲ ಮುಗಿದು ಟ್ರಿಬ್ಯುನಲ್ ಆಗಿದೆ. ಕಾನೂನು ವ್ಯಾಪ್ತಿಯಲ್ಲಿ ಇದೆ. ಇವಾಗ ನಾನು ಸಂಸದನಾಗಿ ಮಾಡುತ್ತೇನೆ ಎಂದರೆ ಅರ್ಥ ಏನು?. ಮಾಜಿ ಸಿಎಂ ಆದವರು ಏಕೆ ಸುಳ್ಳು ಹೇಳಬೇಕು ಎಂದು ಟೀಕಿಸಿದರು.

ಹಾಸನ ಪೆನ್‌ಡ್ರೈವ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರ ವಯಕ್ತಿಕ ವಿಚಾರ, ದೊಡ್ಡ ಕುಟುಂಬ ನಾನು ಮಾತನಾಡಿದರೆ ಚೆನ್ನಾಗಿರಲ್ಲ. ದೇಶದ ಪ್ರಧಾನಿ, ಮುಖ್ಯಮಂತ್ರಿ, ಅವರು ಬಿಟ್ಟು ಅವರ ಮಕ್ಕಳಿಗೂ ಸ್ಥಾನ ಕೊಟ್ಟಿದ್ದಾರೆ. ಇದರ ಬಗ್ಗೆ ನಾನು ಟೀಕೆ ಮಾಡಲ್ಲ. ವೈಯಕ್ತಿಕ ಜೀವನದಲ್ಲಿ ಒಂದಷ್ಟು ತಪ್ಪು ನಡೆಯುತ್ತದೆ. ಅವರಿಗೆ ಬಿಟ್ಟ ವಿಚಾರ. ಆದರೆ ಒತ್ತಾಯಪೂರ್ವಕವಾಗಿ ತೊಂದರೆ ಕೊಡುವುದು ಸರಿಯಲ್ಲ. ಇದಕ್ಕೆಲ್ಲ ಅವರ ಕುಟುಂಬವೇ ಉತ್ತರ ಕೊಡಬೇಕು. ದೇವೇಗೌಡರಿಗೆ ರಾಜಕೀಯದಲ್ಲಿ ಅವರದೇ ಅದ ಗೌರವ ಇದೆ. ಈ ವಿಚಾರಕ್ಕೆ ಅವರನ್ನು ಎಳೆಯಲ್ಲ. ಅವರ ಕುಟುಂಬದ ಯಾವುದೇ ವಿಚಾರ ಇದ್ದರೂ ಕುಮಾರಸ್ವಾಮಿ ಅವರೇ ಹೊಣೆ ಹೊರಬೇಕು. ಅದು ಎಷ್ಟರ ಮಟ್ಟಿಗೆ ಸತ್ಯ, ಸರಿ ಅಥವಾ ತಪ್ಪು ಎಂದು ವಿಶ್ಲೇಷಣೆ ಮಾಡಲ್ಲ. ಎಚ್‌ಡಿಕೆ ಸಿಕ್ಕಿದರೆ ಪೆನ್ ಡ್ರೈವ್ ಬಗ್ಗೆ ಕೇಳಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net