

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಫೈನಲ್ ಆಗಿದೆ. ಪಕ್ಷದ ಹೈಕಮಾಂಡ್ ಹೆಸರು ೋಷಣೆ ಮಾಡುತ್ತದೆ. ಆದ್ದರಿಂದ ಅದಕ್ಕೆ ಮೊದಲು ನಾನು ಹೇಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ಗಂಭೀರವಾಗಿ ಚುನಾವಣೆ ಎದುರಿಸಬೇಕೆಂದು ಸೂಚನೆ ಬಂದಿದೆ. ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಬೇಕು. ಇನ್ನು ಒಕ್ಕಲಿಗರಿಗೆ ಕಾಂಗ್ರೆಸ್ ಪಕ್ಷ ಹೆಚ್ಚು ಆದ್ಯತೆ ಕೊಟ್ಟಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಸಹಾಯ ಮಾಡಬೇಕೆಂದು ಸಭೆಯಲ್ಲಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಒಬ್ಬರಿಗೆ ಮಾತ್ರ ಜವಾಬ್ದಾರಿ ಕೊಟ್ಟಿಲ್ಲ. ಬದಲಿಗೆ ಪಕ್ಷದ ಎಲ್ಲ ನಾಯಕರು, ಸಚಿವರು, ಶಾಸಕರಿಗೆ ಹೊಣೆ ನೀಡಲಾಗಿದೆ. ನಾವು ಯಾರನ್ನೂ ವೀಕ್ ಮಾಡಲು ಆಗಲ್ಲ. ಸಂದರ್ಭ ಬಂದಾಗ ಜನರು ತೀರ್ಮಾನ ಮಾಡ್ತಾರೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚು ಕ್ಷೇತ್ರ ಗೆಲ್ಲಬೇಕು. ಬೇರೆಯವರನ್ನು ಹೀಯಾಳಿಸುವುದೆಲ್ಲ ನಮಗೆ ಇಲ್ಲ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಟಿಕೆಟ್ ಗೊಂದಲದಿಂದ ಕಾಂಗ್ರೆಸ್‌ಗೆ ಲಾಭ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರದೋ ವೀಕ್ನೆಸ್ ನಮಗೆ ಶಕ್ತಿ ಅಲ್ಲ. ನಾವು ಶಕ್ತಿಯಾಗಲು ಯೋಚನೆ ಮಾಡುತ್ತೇವೆ. ಅವರು ಯಾರನ್ನಾದರೂ ಅಭ್ಯರ್ಥಿ ಹಾಕಿಲಿ. ಜೆಡಿಎಸ್ ಅವರಾದರೂ ಬರಲಿ, ಬಿಜೆಪಿ ಅವರಾದರೂ ಬರಲಿ. ಅವರು ಕಿತ್ತಾಡುತ್ತಾ ಇದಾರೆ ಅಂದರೆ ನಮಗೆ ಸಂಬಂಧ ಇಲ್ಲದ ವಿಚಾರ. ಅವರಿಬ್ಬರು ಹೊಂದಾಣಿಕೆ ಆಗುತ್ತಾರೋ, ಸ್ಪರ್ಧೆ ಮಾಡುತ್ತಾರೋ ಅವರಿಗೆ ಬಿಟ್ಟಿದ್ದು. ಅಲ್ಲಿ ಏನು ಆಗುತ್ತಿದೆ ಎಂದು ನನಗೆ ಗೊತ್ತಿಲ್ಲವೆಂದು ಹೇಳಿದರು.
ನಾಟಿಯನ್ನು ಚೆಲುವಣ್ಣ ಅಡುಗೆ ಮನೆಯಲ್ಲಿಟ್ಟುಕೊಳ್ಳಲಿ ಎಂದಿದ್ದ ಸಂಸದೆಗೆ ತಿರುಗೇಟು ನೀಡಿದ ಸಚಿವರು, ಅವರಷ್ಟು ಬುದ್ದಿವಂತರು ನಾನಲ್ಲ. ನಾನು ನಮ್ಮ ಜಿಲ್ಲೆಯ ಮಣ್ಣಿನ ಒಬ್ಬರನ್ನು ಅಭ್ಯರ್ಥಿ ಮಾಡುತ್ತೇವೆ ಎಂದಿದ್ದೆ. ಅವರು ಅದಕ್ಕೆ ಏನು ವಿವರಣೆ ಕೊಡುತ್ತಾರೆಯೋ ಕೊಡಲಿ. ಅವರು ಸಂಸದರು, ರಾಷ್ಟ್ರೀಯ ಪಕ್ಷದಲ್ಲಿ ಟಿಕೆಟ್‌ಗೆ ಫೈಟ್ ಮಾಡುತ್ತಿದ್ದಾರೆ ಒಳ್ಳೆಯದಾಗಲಿ. ಪಾರ್ಲಿಮೆಂಟ್‌ಗೆ ಯಾರು, ಯಾವಾಗ ಸೂಟ್ ಹಾಗುತ್ತಾರೆಂದು ಜನರು ನಿರ್ಧಾರ ಮಾಡುತ್ತಾರೆ. ಇದು ಪ್ರಜಾಪ್ರಭುತ್ವದ ಕಾಲ. ಈ ಜಿಲ್ಲೆಯ ಜನರೇ ತೀರ್ಮಾನ ಮಾಡಬೇಕು. ಪಾರ್ಲಿಮೆಂಟ್‌ಗೆ ಸ್ಟ್ರಾಂಗ್ ಇದ್ದವರು ಹೋಗಬೇಕೆಂದು ಅವರು ಹೇಳಿದ್ದಾರೆ. ಯಾರು ಯಾವ ಕಾಲದಲ್ಲಿ ಪಾರ್ಲಿಮೆಂಟ್‌ಗೆ ಹೋಗಿ ಸ್ಟ್ರಾಂಗ್ ಆಗಿದ್ದಾರೆಂಬ ಇತಿಹಾಸ ಗೊತ್ತಿದೆ. ಜನರು ತೀರ್ಮಾನ ಮಾಡುವವರೆಗೆ ತಡೆದುಕೊಂಡು ಇರಬೇಕು ಎಂದು ಟೀಕಿಸಿದರು.
ಕೆಆರ್‌ಎಸ್ ಡ್ಯಾಂನಿಂದ ನಾಲೆಗಳಿಗೆ ಇನ್ನೊಂದು ಕಟ್ಟು ನೀಡಬೇಕೆಂದು ರೈತರು ಬೇಡಿಕೆ ಇಡುತ್ತಿದ್ದಾರೆ. ಕಳೆದ ಬೆಳೆಗೆ ಕಷ್ಟ ಎಂಬ ಪರಿಸ್ಥಿತಿಯಲ್ಲೂ ನೀರು ಬಿಟ್ಟು ರಕ್ಷಣೆ ಮಾಡಿದ್ದೇವೆ. ಸಂಕ್ರಾಂತಿ ವೇಳೆ ಅವಕಾಶವಿಲ್ಲದಿದ್ದರು ನೀರು ಹರಿಸಲಾಗಿತ್ತು. ಕುಡಿಯುವ ನೀರು ಬಿಟ್ಟು ಉಳಿಕೆ ಒಂದು ಟಿಎಂಸಿ ನೀರನ್ನು ರೈತರಿಗೆ ಕೊಡುತ್ತೇವೆ. ರೈತರ ಪರಿಸ್ಥಿತಿ ನಮಗೆ ಅರಿವಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಮಾತಾಡುತ್ತೇನೆ. ಮಳೆಗಾಲ ಬರುವವರೆಗೆ ಇನ್ನೂ 2 ಟಿಎಂಸಿ ಕೊರತೆ ಆಗುತ್ತೆ ಎಂದು ಹೇಳುತ್ತಿದ್ದಾರೆ. ಬೆಳೆಗಳಿಗೆ ಬಿಡುವ ಅವಕಾಶ ಇದೆಯೇ ಎನ್ನುವುದನ್ನು ನೋಡುತ್ತೇನೆ ಎಂದು ಸಚಿವರು ತಿಳಿಸಿದರು.
ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಟ್ರಯಲ್ ಬ್ಲಾಸ್ಟ್ ಮಾಡಲು ಹೈಕೋರ್ಟ್‌ನಿಂದ ಆದೇಶ ಮಾಡಿದೆ. 6 ತಿಂಗಳ ಒಳಗೆ ಟ್ರಯಲ್ ಬ್ಲಾಸ್ಟ್ ಮಾಡಬೇಕೆಂದು ಹೇಳಿದೆ. ಬ್ಲಾಸ್ಟ್ ಮಾಡಿ ಅನುಮತಿ ಕೊಡುತ್ತಾರೆಂಬ ಆತಂಕ ಕೆಲವರಲ್ಲಿ ಇದೆ. ರೈತರು ಹೈಕೋರ್ಟ್ ಆದೇಶವನ್ನು ಮನ್ನಣೆ ಮಾಡಬೇಕೆಂದ ಮನವಿ ಮಾಡುತ್ತೇನೆ. ಆದ್ದರಿಂದ ರೈತರನ್ನು ವಿಶ್ವಾಸಕ್ಕೆ ತೆಗದುಕೊಂಡು ಟ್ರಯಲ್ ಬ್ಲಾಸ್ಟ್ ಮಾಡುತ್ತೇವೆ. ಯಾವುದಕ್ಕೂ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ರೈತರನ್ನು ಕರೆದು ಈ ಬಗ್ಗೆ ಮಾತಾಡುತ್ತೇವೆ. ಯಾರ ಮೇಲು ಜಗಳ ಮಾಡುವ ಅವಶ್ಯಕತೆ ನನಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ದೇವಸ್ಥಾನಗಳ ಶೇ.10ರಷ್ಟು ಆದಾಯ ತೆಗೆದುಕೊಳ್ಳಬೇಕೆಂದು ಸರ್ಕಾರ ನಿರ್ಧಾರ ಮಾಡಿದೆ. ಈಗ ಎಪಿಎಂಸಿಯ ಎ ಕ್ಯಾಟಗಿರಿ ಹಣ ತೆಗೆದು ಸಿ ಕ್ಯಾಟಗಿರಿಯನ್ನು ಅಭಿವೃದ್ಧಿ ಮಾಡಬೇಕೆಂದು ಆದೇಶ ಮಾಡಿದ್ದೆ. ಅದೇ ರೀತಿ ನಾವು ತೀರ್ಮಾನ ಮಾಡಿದ್ದೇವೆ. ಕೆಲವು ದೇವಸ್ಥಾನಗಳಲ್ಲಿ ಹೆಚ್ಚು ಆದಾಯ ಬರುತ್ತದೆ. ಹೆಚ್ಚು ಆದಾಯ ಬರುವ ದೇವಸ್ಥಾನ ಹಣ ತೆಗೆದುಕೊಂಡು ಬೇರೆ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡುತ್ತೇವೆ. ಎಲ್ಲ ದೇವರು ಒಂದೇ ಎಂದರು.