

ಮಂಡ್ಯ: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಷ್ಟೇ ಬಾಕಿ ಇರುವಂತೆ ಹಲವು ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಅದರಂತೆ ಬಿಜೆಪಿಯನ್ನು ಬೆಂಬಲಿಸಿರುವ ಪಕ್ಷೇತರ ಸಂಸದೆಗೆ ಪಕ್ಷದ ಟಿಕೆಟ್ ಸಿಗುವುದು ಅನುಮಾನ ಮೂಡಿಸಿದೆ. ಇದಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಾಯಣ ಅವರ ಹೇಳಿಕೆ ಇಂಬು ನೀಡಿದೆ.
ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ೋಷಣೆಯಾಗಿದೆ. ಅದರಂತೆ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ದಳದ ಅಭ್ಯರ್ಥಿ ಕಣಕ್ಕಿಳಿಯುವುದು ಖಚಿತ. ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿರುವುದರಿಂದ ಕ್ಷೇತ್ರ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗುತ್ತಿದೆ. ಅದರಂತೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾ ನಾಯಕರೊಂದಿಗೆ ಸಭೆ ಆಯೋಜಿಸಿ ಚರ್ಚೆ ಮಾಡಿದ್ದಾರೆ.
ಈ ಬೆಳವಣಿಗೆ ಮಂಡ್ಯ ಕ್ಷೇತ್ರವನ್ನು ಬಿಜೆಪಿ ಬಿಟ್ಟು ಕೊಡಬೇಕೆನ್ನುವುದನ್ನು ಪರೋಕ್ಷವಾಗಿ ಸೂಚಿಸಿದಂತಾಗಿದೆ. ಆದರೆ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿರುವ ಸಂಸದೆಗೆ ಅವಕಾಶ ಸಿಗುವುದು ಬಹುತೇಕ ಕಷ್ಟ ಎನ್ನಿಸುತ್ತಿದೆ. ಇತ್ತೀಚೆಗೆ ಬೆಂಬಲಿಗರು ಪತ್ರಿಕಾಗೋಷ್ಠಿ ನಡೆಸಿ ಸಂಸದೆ ಸ್ಪರ್ಧೆಗೆ ಬಿಜೆಪಿ ನಾಯಕರು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಒಂದು ವೇಳೆ ಟಿಕೆಟ್ ಸಿಗದಿದ್ದರೂ ಸ್ಪರ್ಧೆ ಖಚಿತವೆಂದು ತಿಳಿಸಿದ್ದರು.
ಈ ನಡುವೆ ಗುರುವಾರ ಆದಿಚುಂಚನಗಿರಿಯಲ್ಲಿ ಮಾತನಾಡಿರುವ ಡಾ.ಸಿ.ಎನ್.ಅಶ್ವಥ್‌ನಾರಾಯಣ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟರೆ ಅಭ್ಯರ್ಥಿ ಯಾರೆಂದು ಕುಮಾರಸ್ವಾಮಿ ನಿರ್ಧರಿಸುತ್ತಾರೆ. ಬಿಜೆಪಿಯಿಂದ ಸ್ಪರ್ಧೆಗೆ ಅವಕಾಶ ಸಿಕ್ಕರೆ ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ಒಂದು ವೇಳೆ ಯಾರೇ ಅಭ್ಯರ್ಥಿಯಾದರೂ ನಮ್ಮ ಬೆಂಬಲ ಇರಲಿದೆ. ನಮ್ಮ ಪಕ್ಷ ನಂಬಿ ಬಂದವರಿಗೆ ಒಳ್ಳೆಯ ಅವಕಾಶ ಸಿಗಲಿದೆ. ಪಕ್ಷ ವಿಶಾಲವಾಗಿದೆ ಎಂದಿದ್ದಾರೆ.