

ಮೈಸೂರು: ಲೋಕಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಹಾಗೂ ಯಾವುದೇ ಲೋಪವಾಗದಂತೆ ಅಧಿಕಾರಿ ಗಳು ತಮಗೆ ವಹಿಸಿದ ಕೆಲಸಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ನಿರ್ದೇಶನ ನೀಡಿದರು.
ಕೆ.ಆರ್. ನಗರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಉಭಯ ಜಿಲ್ಲಾಧಿಕಾರಿಗಳು, ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಸೌಕರ್ಯಗಳನ್ನು ಪರಿಶೀಲಿಸಿ ನ್ಯೂನತೆಗಳಿದ್ದಲ್ಲಿ ಸರಿಪಡಿಸಬೇಕು ಎಂದರು.
ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಅದಕ್ಕೆ ಸಂಬಂಧಿಸಿದ ನಮೂನೆಗಳನ್ನು ಭರ್ತಿ ಮಾಡುವ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಬಿಎಲ್‌ಒಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಭರ್ತಿ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಂತರ ಜಿಲ್ಲಾ ಗಡಿಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ತಕ್ಷಣ ಅದರ ನಿಯಮಗಳಂತೆ ಚೆಕ್‌ಪೋಸ್ಟ್ ನಿರ್ಮಿಸಿ ಅಲ್ಲಿನ ಸಿಬ್ಬಂದಿಗೆ ಮೂಲಸೌಕರ್ಯ ಕಲ್ಪಿಸಿಕೊಟ್ಟು ನಿಯಮಿತವಾಗಿ ವಾಹನ ತಪಾಸಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಸಾರ್ವಜನಿಕ ಪ್ರದೇಶಗಳಿಂದ ನಿಗದಿತ ಅವಧಿಯಲ್ಲಿ ತೆರವುಗೊಳಿಸುವಂತೆ ಹಾಗೂ ಕಾಮಗಾರಿಗಳು ಯಾವ ಹಂತದಲ್ಲಿವೆ ಎಂಬ ಪಟ್ಟಿಯನ್ನು ತಯಾರಿಸಿ ವರದಿ ಪರಿಶೀಲಿಸಲು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಎಆರ್‌ಒ ಸುಪ್ರಿಯಾ ಬಣಗಾರ್ ಹಾಗೂ ಇತರರು ಇದ್ದರು.