ಏ.1ಕ್ಕೆ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ

Lok Sabha Elections Mandya
Published on

ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಏ.1ರಂದು ಬೆಳಗ್ಗೆ 10ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಬಂದೀಗೌಡ ಬಡಾವಣೆಯಲ್ಲಿರುವ ಸ್ಟಾರ್ ಚಂದ್ರು ಅವರ ಚುನಾವಣಾ ಕಚೇರಿಯಲ್ಲಿ ಮಾತನಾಡಿದ ಅವರು, ಚಂದ್ರು ಪರವಾಗಿ ರಾಹುಲ್ ಗಾಂಧಿ ಪ್ರಚಾರ ಕೈಗೊಳ್ಳುವ ಸಾಧ್ಯತೆಯಿದೆ. ಕೆ.ಆರ್.ಪೇಟೆ ಮತ್ತು ಕೆ.ಆರ್.ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತಯಾಚನೆ ಮಾಡಲಿದ್ದಾರೆ ಎಂದರು.

ಕಳೆದ ಒಂದು ತಿಂಗಳಿಂದ ಪ್ರಚಾರ ನಡೆಸುತ್ತಿದ್ದೇವೆ. ಮೊದಲ ಹಂತದಲ್ಲಿ ಗ್ಯಾರಂಟಿ ಸಭೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಭೇಟಿ ಮಾಡಿ ತಾಲೂಕು, ಬೂತ್‌ನ ಜವಾಬ್ದಾರಿ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದೇವೆ. ಮಾ.29ರೊಳಗೆ ತಾಲೂಕು ಮಟ್ಟದ ಕಾರ್ಯಕರ್ತರ ಸಭೆ ನಡೆಸಲಾಗುವುದು ಎಂದ ಅವರು, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಅವರು ಯಾವುದೇ ಷರತ್ತು ಇಲ್ಲದೆ ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಸಂಸದೆ ಸುಮಲತಾ ಅವರು ಅಂಬರೀಷ್ ಕಾಲದಿಂದಲೂ ಪರಿಚಯ. ಅವರ ರಾಜಕೀಯ ನಡೆ ಬಗ್ಗೆ ಮಾತನಾಡಲ್ಲ. ಒಂದು ವೇಳೆ ಅವರು ನಮಗೆ ಬೆಂಬಲ ಕೊಟ್ಟರೂ ಬೇಡ ಎನ್ನುವುದಿಲ್ಲ ಎಂದು ಹೇಳಿದರು.

ಯಾರೇ ಅಭ್ಯರ್ಥಿಯಾದರೂ ಕಾಂಗ್ರೆಸ್ ಶಾಸಕರು, ಬೂತ್‌ಮಟ್ಟದ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಗ್ಯಾರಂಟಿ ಯೋಜನೆ, ನಮ್ಮ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಿ ಮತ ಕೇಳುತ್ತೇವೆ. ಮೈತ್ರಿ ಪಕ್ಷದವರು ಮಂಡ್ಯದಲ್ಲಿ ಒಂದು ತಿಂಗಳಿಂದ ಅಭ್ಯರ್ಥಿ ಘೋಷಿಸಿಲ್ಲ. ಜಿಲ್ಲೆಯ ಜನರು ಬುದ್ಧಿವಂತರು, ಹತ್ತು ಬಾರಿ ಯೋಚಿಸಿ ಮತ ಹಾಕುತ್ತಾರೆ ಎಂದು ಅಭಿಪ್ರಾಯ ವ್ತಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು, ಶಾಸಕ ರವಿಕುಮಾರ್ ಗಣಿಗ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net