ಮೈತ್ರಿ ಅಭ್ಯಥಿ ಗೆಲುವಿಗೆ ಶ್ರಮ: ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಹೇಳಿಕೆ

BJP district president C.P.Umesh
Published on

ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಿದರೂ ಅವರ ಗೆಲುವಿಗೆ ಶ್ರಮಿಸುತ್ತೇವೆ. ಅಂತೆಯೇ ಎಂಪಿ ಚುನಾವಣೆ ಬಳಿಕ ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಹೇಳಿದರು.

ಪಾಂಡವಪುರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಪಕ್ಷದ ನಡುವೆ ರಾಷ್ಟ್ರಮಟ್ಟದಲ್ಲಿ ಮೈತ್ರಿಯಾಗಿದೆ. ಅದರಂತೆ ಜೆಡಿಎಸ್ ಎನ್‌ಡಿಎ ಕೂಟಕ್ಕೆ ಸೇರ್ಪಡೆಗೊಂಡಿದೆ. ನರೇಂದ್ರಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡುವ ಉದ್ದೇಶದಿಂದ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಾಗುವುದು. ಅಂತೆಯೇ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಅಸ್ಥಿರವಾಗಿದೆ. ಆ ಪಕ್ಷದ ಶಾಸಕರೇ ಆಡಳಿತದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಕಾಂಗ್ರೆಸ್ ಹಿಂದು ವಿರೋಧಿ ಪಕ್ಷವಾಗಿದೆ. ಬಿಜೆಪಿಗೆ ರಾಜಕೀಯಕ್ಕಿಂತ ದೇಶವೇ ಮುಖ್ಯ. ದೇಶದ ಸಂರಕ್ಷಣೆಗಾಗಿ ಬಿಜೆಪಿ ಹೋರಾಟ ನಡೆಯಲಿದೆ. ಹಾಗಾಗಿ ಜನತೆ ದೇಶದ ರಕ್ಷಣೆಗಾಗಿ ಬೆಂಬಲಿಸಬೇಕು ಎಂದು ಎಂದು ಮನವಿ ಮಾಡಿದರು.

ಪಾಂಡವಪುರ ಪುರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪ್ರತ್ಯೇಕವಾಗಿಯೇ ಸ್ಪರ್ಧೆ ಮಾಡಿದ್ದೇವೆ. ಮೈತ್ರಿಯಾಗಿದ್ದರೂ ಕ್ಷೇತ್ರ ಹಂಚಿಕೆ ಪ್ರಕ್ರಿಯೆಗಳು ನಡೆಯದೆ ಇರುವ ಹಿನ್ನೆಲೆಯಲ್ಲಿ ಹಾಗೂ ಅದಕ್ಕೂ ಮುನ್ನವೇ ಪುರಸಭೆ ಉಪ ಚುನಾವಣೆ ಎದುರಾಗಿರುವುದರಿಂದ ಪ್ರತ್ಯೇಕ ಸ್ಪರ್ಧೆ ಮಾಡಲಾಗಿದೆ. ಅದರಂತೆ ಉಪಚುನಾವಣೆಯ ಎರಡು ವಾರ್ಡ್‌ನಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್, ತಾಲೂಕು ಅಧ್ಯಕ್ಷ ಅಶೋಕ್, ಎಚ್.ಎನ್.ಮಂಜುನಾಥ್, ಶ್ರೀಧರ್, ಸತೀಶ್, ಕಾಂತರಾಜ್, ಪುರಸಭೆ ಚುನಾವಣೆ ಅಭ್ಯರ್ಥಿಗಳಾದ ಸೋಮಶೇಖರ್, ಮಧು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net