ಪ್ರಧಾನಿ ಮೋದಿ ಋಣ ತೀರಿಸಲು ಬಿಜೆಪಿಗೆ ಮತ ಹಾಕಿ; ಬಸವರಾಜ ಬೊಮ್ಮಾಯಿ

2-RNR-01
Published on

ರಾಣೆಬೆನ್ನೂರ: ತುಂಗಾ ಮೇಲ್ದಂಡೆ ಯೋಜನೆ ಮೂಲಕ ಹಾವೇರಿ ಜಿಲ್ಲೆಗೆ ನೀರು ತರುವುದು ಅಸಾಧ್ಯವಾಗಿದ್ದನ್ನು ಸಾಧ್ಯ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿಯೆ ಅಸಾಧ್ಯ ಎಂದುಕೊಂಡ ಎಲ್ಲ ಕೆಲಸಗಳನ್ನು ಸಾಧ್ಯ ಮಾಡಿ ತೋರಿಸಿದ್ದಾರೆ. ಅವರ ಋಣ ತಿರಿಸಲು ಬಿಜೆಪಿಗೆ ಮತ ಹಾಕಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಹನುಮಾಪುರ, ಹೊನ್ನತ್ತಿ, ಗುಡ್ಡದ ಆನ್ವೇರಿ, ದೇವರಗುಡ್ಡ, ಖಜ್ಜರಿ ಗ್ರಾಮಗಳಲ್ಲಿ ಬುಧವಾರ ರಾತ್ರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಅವರು ಮಾತನಾಡಿದರು.
ತುಂಗಾ ಮೇಲ್ದಂಡೆ ಯೋಜನೆ ಮೂಲಕ ರಾಣೆಬೆನ್ನೂರಿಗೆ ನೀರು ತರುವ ಯೋಜನೆಯನ್ನು 2008ರಲ್ಲಿ ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಸಭೆ ಮಾಡಿ, 2011ರಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಹೇಳಿದ್ದೆ. ಆದರೆ, ಅದು ಅಸಾಧ್ಯವೆಂದು ಹೇಳಿದ್ದರು. ನಾಲ್ಕು ಬಾರಿ ಟೆಂಡರ್ ಕರೆದರೂ ಯಾರೂ ಬರಲಿಲ್ಲ. ಕಡೆಗೆ ನನ್ನ ಸ್ನೇಹಿತ ತಂತ್ರಜ್ಞಾನ ಬಳಸಿ 150 ಆಳದಲ್ಲಿ ಕೆನಾಲ್ ಮಾಡಿ ನೀರು ತಂದೆವು.
ಸ್ವಾತಂತ್ರೃ ಬಂದ ಮೇಲೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಬ್ಯಾಡಗಿ ಕ್ಷೇತ್ರಕ್ಕೆ ಅತಿ ಹೆಚ್ಚು 2 ಸಾವಿರ ಕೋಟಿ ರೂ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಅವರಿಗೆ ಧನ್ಯವಾದ ಹೇಳಬೇಕು. ಪ್ರಧಾನಿ ನರೇಂದ್ರ ಮೋದಿಯವರು ಮನೆ ಮನೆಗೆ ನಲ್ಲಿ ನೀರು ಕೊಟ್ಟಿದ್ದಾರೆ.
ಉಜ್ವಲ ಗ್ಯಾಸ್ ಕೊಟ್ಟಿದ್ದಾನೆ. ಬಡವರಿಗೆ ಮನೆ ಕಟ್ಟಿಸಿದ್ದಾರೆ. ಕೊವೀಡ್ ಸಂದರ್ಭದಲ್ಲಿ ಹತ್ತು ಕೆಜಿ ಉಚಿತ ಅಕ್ಕಿ ಕೊಟ್ಟಿದ್ದಾರೆ. ಈಗಲೂ ಐದು ಕೆಜಿ ಅಕ್ಕಿ ನರೇಂದ್ರ ಮೋದಿಯವರೇ ಕೊಡುತ್ತಿದ್ದಾರೆ. ದೇಶದ 130 ಕೋಟಿ ಜನರಿಗೆ ಮೋದಿಯವರು ಉಚಿತ ಲಸಿಕೆ ಕೊಡಿಸಿದ್ದಾರೆ. ಅನ್ನ ಕೊಟ್ಟು, ನೀರು ಕೊಟ್ಟು ಜೀವ ಉಳಿಸಿದ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಹೇಳುವ ಸಮಯ ಬಂದಿದೆ. ಬಿಜೆಪಿಗೆ ಮತ ಹಾಕುವ ಮೂಲಕ ಅವರ ಋಣ ತೀರಿಸಿ ಎಂದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net