

ಮಂಡ್ಯ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಗೃಹ ಮತದಾನ ಪ್ರಕ್ರಿಯೆ ಎರಡು ಹಂತದಲ್ಲಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಚುನಾವಣಾ ಮತದಾರರ ಪಟ್ಟಿಯಲ್ಲಿ ನೋಂದಾಯಿತಗೊಂಡಿರುವ ಮತದಾರರ ಪೈಕಿ 85 ವರ್ಷ ಮೀರಿದ ಮತ್ತು ಅಂಗವಿಕಲ ಮತದಾರರು ನಿಗದಿತ ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಸಾಧ್ಯವಾಗದೇ ಇದ್ದಲ್ಲಿ ಅಂತಹ ಮತದಾರರು ಮತದಾನದಿಂದ ವಂಚಿತರಾಗಬಾರದೆಂದು, ಮತದಾನ ದಿನಾಂಕದ ಪೂರ್ವದಲ್ಲಿ ಅವರು ಮನೆಗಳಿಗೆ ತೆರಳಿ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಕಲ್ಪಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ಜಿಲ್ಲೆಯ ಒಟ್ಟು ಮತದಾರರ ಪೈಕಿ 23,044 ಜನ 85ಕ್ಕಿಂತ ಹೆಚ್ಚು ವಯಸ್ಸಿನವರು ಹಾಗೂ 25,673 ಜನ ಅಂಗವಿಕಲ ಮತದಾರರಿದ್ದಾರೆ. ಇಷ್ಟೂ ಜನರಿಗೆ ಮನೆಯಿಂದಲೇ ಮತದಾನ ಮಾಡಲು ಅನುಕೂಲವಾಗುವಂತೆ ಫಾರ್ಮ್ 12ಡಿ ವಿತರಿಸಲಾಗಿದೆ. ಶೇ.40ರಷ್ಟು ಅಂಗವಿಕಲತೆ ಹೊಂದಿದವರಿಗೆ ಮಾತ್ರ ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ 2,569 ಜನರಿಗೆ 85 ವರ್ಷ ಮೇಲ್ಪಟ್ಟವರು, 1075 ಜನ ಅಂಗವಿಕಲರು ಮನೆಯಲ್ಲೇ ಮತದಾನ ಮಾಡಲು ಅನುಮತಿ ಪಡೆದಿದ್ದಾರೆ. ಗೃಹ ಮತದಾನಕ್ಕೆ ಎರಡು ಹಂತದಲ್ಲಿ ನಿಗದಿತ ಮತದಾರರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಏ.16 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ಮೊದಲ ಹಂತ, 18ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ಎರಡನೇ ಹಾಗೂ ಕೊನೆಯ ಹಂತದ ಗೃಹ ಮತದಾನ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತದಲ್ಲಿ ಒಂದು ವೇಳೆ ಮತದಾರ ಲಭ್ಯವಾಗದಿದ್ದಲ್ಲಿ, 18 ರಂದು ಭೇಟಿ ನೀಡಿ ಮತದಾನ ಮಾಡಿಸಲಾಗುವುದು.
ಗೃಹ ಮತದಾನದ ಪ್ರತೀ ಮಾರ್ಗಕ್ಕೆ ಸಂಬಂಧಿಸಿದಂತೆ ಮತಗಟ್ಟೆ ಅಧಿಕಾರಿ/ಸಿಬ್ಬಂದಿ/ರಕ್ಷಣಾ ಸಿಬ್ಬಂದಿ ಹಾಗೂ ಪೂರಕ ಸದಸ್ಯರನ್ನೊಳಗೊಂಡ ತಂಡ ನೇಮಿಸಲಾಗಿದೆ. ನಿಗದಿತ ಮಾರ್ಗದಲ್ಲಿನ ಮತಗಟ್ಟೆಗಳಲ್ಲಿ ಅರ್ಹ ಮತದಾರರು ಮಾತ್ರ ಗೃಹ ಮತದಾನದಲ್ಲಿ ಭಾಗವಹಿಸಲಿದ್ದಾರೆ. ಮತದಾನ ಪ್ರಕ್ರಿಯೆಯನ್ನು ನಿಯಮಬದ್ಧವಾಗಿ ಹಾಗೂ ಮತದಾನದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಗೌಪ್ಯತೆಯೊಂದಿಗೆ ನಡೆಸಲಾಗುವುದು. ನಿಗದಿತ ದಿನಾಂಕದಂದು ತಮ್ಮ ಮನೆಯಲ್ಲಿಯೇ ಇದ್ದು, ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಡಿಸಿ ಡಾ.ಕುಮಾರ ಮನವಿ ಮಾಡಿದ್ದಾರೆ.