ಮತ ಎಣಿಕೆ ಪ್ರಕ್ರಿಯೆಯಲ್ಲಿ ಲೋಪವಾಗದಿರಲಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Lok Sabha election vote counting related training Mandya
Published on

ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಮತ ಎಣಿಕೆ ಕಾರ್ಯ ಜೂ.4ರಂದು ನಡೆಯಲಿದೆ. ಉತ್ತಮ ರೀತಿಯಲ್ಲಿ ತರಬೇತಿ ಪಡೆದು ಯಾವುದೇ ಲೋಪದೋಷವಿಲ್ಲದೇ ಮತ ಎಣಿಕೆ ಕಾರ್ಯ ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಇವಿಎಂ ಮತ ಎಣಿಕೆ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಮತದಾನ ಕಾರ್ಯಕ್ಕೆ ಸಂಬಂಧಿಸಿದಂತೆ ನೇಮಕಗೊಂಡಿದ್ದ ಸೆಕ್ಟರ್ ಅಧಿಕಾರಿ, ಎಆರ್‌ಒ, ಪಿಆರ್‌ಒ, ಮಾಸ್ಟರ್ ಟ್ರೈನರ್‌ಗಳನ್ನೇ ಮತ ಎಣಿಕೆ ಪ್ರಕ್ರಿಯೆಗೆ ನೇಮಕ ಮಾಡಲಾಗಿದೆ. ಎಲ್ಲ ಸಿಬ್ಬಂದಿಗೂ ಇವಿಎಂ ಬಳಕೆಯ ಅನುಭವವಿರುವುದರಿಂದ ಭಯ ಪಡದೆ ಧೈರ್ಯ ಹಾಗೂ ಆತ್ಮ ವಿಶ್ವಾಸದಿಂದ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ಮತ ಎಣಿಕೆಯ ದಿನ ಎಲ್ಲ ಸಿಬ್ಬಂದಿ ನಿಗದಿಪಡಿಸುವ ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ಮತ ಎಣಿಕೆ ಕೊಠಡಿಗೆ ಮೊಬೈಲ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರತಿ ಟೇಬಲ್ ಮೇಲೂ ಸಿ.ಸಿ ಕ್ಯಾಮೆರಾ ಅಳವಡಿಸಲಾಗುವುದು. ಆದ್ದರಿಂದ ಬಹಳ ಜಾಗರೂಕತೆಯಿಂದ ಮತ ಎಣಿಕೆ ನಡೆಸಿ. ಮತ ಎಣಿಕೆಯ ಕೆಲ ಸಂದರ್ಭದಲ್ಲಿ ಇವಿಎಂಗೆ ಸಂಬಂಧಿಸಿದಂತೆ ತಾಂತ್ರಿಕ ತೊಂದರೆ ಉಂಟಾಗಬಹುದು. ಕ್ಲೋಸ್ ಬಟನ್ ಉಪಯೋಗಿಸಿ ಕ್ಲೋಸ್ ಮಾಡದ ಪ್ರಕರಣ ಕಂಡು ಬರಬಹುದು. ಇಂತಹ ಸಂದರ್ಭದಲ್ಲಿ ಯಾವ ರೀತಿ ಕೆಲಸ ನಿರ್ವಹಿಸಬೇಕು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದ್ದು, ಅದನ್ನು ತಪ್ಪದೇ ಅನುಸರಿಸಬೇಕು. ಸಮಸ್ಯೆ ಎದುರಾದಾಗ ಅದಕ್ಕೆ ತಹಸೀಲ್ದಾರ್ ಅಥವಾ ಸಹಾಯಕ ಚುನಾವಣಾಧಿಕಾರಿ ಬಳಿ ಪರಿಹಾರ ಪಡೆದುಕೊಳ್ಳುತ್ತೇವೆ ಎಂಬ ಮನೋಭಾವ ಇರಬರದು ಎಂದರು.

ಮತ ಎಣಿಕೆಗೆ ಸಂಬಂಧಿಸಿದಂತೆ ನಿಯೋಜಿಸಲಾಗುವ ಏಜೆಂಟ್‌ಗಳ ಬಳಿ ಶಾಂತವಾಗಿ ವರ್ತಿಸಿ. ಅವರಿಗೆ ಏನಾದರೂ ಸಂಶಯಗಳಿದ್ದಲ್ಲಿ ಅವುಗಳನ್ನು ಪರಿಹರಿಸಿ. ಮತ ಎಣಿಕೆ ಮೇಲ್ವಿಚಾರಕರ ಜವಾಬ್ದಾರಿ ಬಹಳ ಮುಖ್ಯವಾಗಿದ್ದು, ಮೇಲ್ವಿಚಾರಕರು ಪ್ರತಿ ಇವಿಎಂ ಗಳಲ್ಲಿ ಎಣಿಕೆಯಾದ ತಕ್ಷಣ ನಿಖರವಾಗಿ ಅಂಕಿ ಅಂಶಗಳನ್ನು ಬರೆದುಕೊಳ್ಳಬೇಕು. ಇದರಲ್ಲಿ ತಪ್ಪಾದರೆ ಎಣಿಕೆ ಕೆಲಸಗಳು ಕಷ್ಟಕರವಾಗುತ್ತದೆ. ಆದರಿಂದ ತರಬೇತಿ ಅವಧಿಯಲ್ಲಿ ಸ್ಪಷ್ಟವಾದ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಿರಿ. ಯಾವುದೇ ಗೊಂದಲವಿದ್ದರೂ ಇಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಸಹಾಯಕ ಚುನಾವಣಾಧಿಕಾರಿಗಳಾದ ಮಹೇಶ್, ಆನಂದ್‌ಕುಮಾರ್, ಕೃಷ್ಣಕುಮಾರ್, ಲೋಕನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net