ಲೋಕಸಭೆ ಎಲೆಕ್ಷನ್: ಮೈಸೂರು, ಚಾಮರಾಜನಗರ ಡಿಸಿಗಳ ಸಭೆ

mys, chn dcc election meeting
Published on

ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಮೈಸೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲಿ ಬರುವ ಮತಗಟ್ಟೆಗಳಲ್ಲಿ ಮೂಲಸೌಕರ್ಯ ಪರಿಶೀಲಿಸಿ ಸಮರ್ಪಕವಾಗಿ ಇವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಬಂಡೀಪುರ ಪ್ರವಾಸಿ ಮಂದಿರದಲ್ಲಿಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆ ಕುರಿತ ಪೂರ್ವಸಿದ್ಧತಾ ಸಭೆಯಲ್ಲಿ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿ ಮಾತನಾಡಿದರು.


ವಿಧಾನಸಭಾ ಕ್ಷೇತ್ರಗಳಲ್ಲಿರುವ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಗೃಹ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳ ಬಗ್ಗೆ ಪರಿಶೀಲಿಸಿ ದೃಢೀಕರಣವನ್ನು ಮಾರ್ಚ್ 6ರೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.


ಎರಡೂ ಜಿಲ್ಲೆಯ ಗಡಿಭಾಗಗಳಲ್ಲಿ ಅಂತಾರಾಜ್ಯ ಚೆಕ್‌ಪೋಸ್ಟ್ ಗುರುತಿಸಬೇಕಿದೆ. ಉಭಯ ಜಿಲ್ಲೆಗಳ ಅಧಿಕಾರಿಗಳು ಈ ಕಾರ್ಯವನ್ನು ಕೈಗೊಂಡು ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪನೆ ಮಾಡಬೇಕಿದೆ. ಜಿಲ್ಲೆಯಿಂದ ಆಗಮಿಸುವ ಹಾಗೂ ನಿರ್ಗಮಿಸುವ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಬೇಕು. ಈ ಬಗ್ಗೆ ಅರಿವು ಮೂಡಿಸುವ ಫಲಕ ಅಳವಡಿಸಬೇಕೆಂದು ಡಿಸಿಗಳು ಸೂಚಿಸಿದರು.


ಗಡಿ ರಾಜ್ಯಗಳಿಂದ ಅಕ್ರಮ ಮದ್ಯ, ಹಣ, ಇತರ ಮಾದಕ ವಸ್ತುಗಳು ಸಾಗಾಟವಾಗದಂತೆ ಕಟ್ಟೆಚ್ಚೆರ ವಹಿಸಬೇಕಿದೆ. ಗಡಿಭಾಗಗಳಲ್ಲಿ ಅರಣ್ಯ ಪ್ರದೇಶಗಳು ಹೆಚ್ಚಿರುವುದರಿಂದ ತೀವ್ರ ನಿಗಾ ಇಡಬೇಕಿದೆ. ಅಲ್ಲದೆ ಅರಣ್ಯದಂಚಿನಲ್ಲಿ ಬರುವ ನದಿ ಪಾತ್ರಗಳಲ್ಲಿ ತೆಪ್ಪಗಳ ಮೂಲಕ ಸಾಗಿಸುವ ವಸ್ತುಗಳನ್ನು ಪರಿಶೀಲಿಸಬೇಕಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ತಂಡಗಳನ್ನು ರಚಿಸಿ ವರದಿ ಪಡೆದುಕೊಳ್ಳಬೇಕಿದೆ ಎಂದರು.


ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಣೆಗೆ ಹೆಚ್ಚುವರಿ ತಂಡಗಳನ್ನು ನಿಯೋಜನೆ ಮಾಡಬೇಕು. ಈ ತಂಡಗಳು ಪ್ರತಿದಿನ ಬೇರೆ ಬೇರೆ ಸ್ಥಳಗಳಲ್ಲಿ ತೆರಳಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಚೆಕ್‌ಪೋಸ್ಟ್ ನಿರ್ಮಿಸುವಾಗ ಶಾಮಿಯಾನ ಬದಲು ಸುಭದ್ರವಾದ ಶೀಟ್‌ಗಳನ್ನು ಬಳಸಿ ನಿಮಾಣ ಮಾಡಬೇಕು. ಕುಡಿಯುವ ನೀರು, ಶೌಚಗೃಹದಂತಹ ಮೂಲ ಸೌಕರ್ಯಗಳು ಇರಬೇಕು ಎಂದು ತಿಳಿಸಿದರು.


ಮೈಸೂರು ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಮೈಸೂರು ಎಸ್‌ಪಿ ಸೀಮಾ ಲಾಟ್ಕರ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ರಮೇಶ್‌ಕುಮಾರ್, ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಉಭಯ ಜಿಲ್ಲೆಗಳ ತಹಸೀಲ್ದಾರರು, ಸಹಾಯಕ ಚುನಾವಣಾಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಅರಣ್ಯ, ಅಬಕಾರಿ, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net