

ಮಂಡ್ಯ: ಈ ರಾಷ್ಟ್ರಕ್ಕೆ ಕಾಂಗ್ರೆಸ್ಸಿನ ಕೊಡುಗೆ ಬಹಳ ಇದೆ. ಜತೆಗೆ ಅಂಬೇಡ್ಕರ್ ಅವರ ಕೊಡುಗೆಯೂ ಇದೆ. ಇಂತಹ ಅಂಬೇಡ್ಕರ್ ಚುನಾವಣೆಯಲ್ಲಿ ಸ್ಪರ್ಧಿಸಿದ ವೇಳೆ ಅವರನ್ನು ಕಾಂಗ್ರೆಸ್ಸಿಗರೇ ಸೋಲಿಸಿದರು ಎಂದು ಪದೇ ಪದೇ ಬಿಜೆಪಿಯವರು ಹೇಳುತ್ತಲೇ ಇದ್ದಾರೆ. ಅದರ ಮೂಲ ಹುಡುಕಿದಾಗ ತಿಳಿದಿದ್ದು, ಕಾಂಗ್ರೆಸ್‌ನೊಳಗಿದ್ದ ಪುರೋಹಿತಶಾಯಿ ಬಾಬಾಸಾಹೇಬರನ್ನು ಸೋಲಿಸಿದವರು ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಕಾಂಗ್ರೆಸ್ ಪಕ್ಷ ಎಂದಿಗೂ ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದು ಹಾಳುವ ಕೆಲಸ ಮಾಡಲಿಲ್ಲ. ಬದಲಾಗಿ ದೇಶಕ್ಕಾಗಿ ಪ್ರಾಣಾರ್ಪಣೆಯೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರ ಆಡಳಿತವನ್ನು ಸಹಿಸದೆ ಹತ್ಯೆ ಮಾಡಿದರು. ನಂತರ ಅನಿವಾರ್ಯವಾಗಿ ರಾಜೀವ್‌ಗಾಂಧಿ ಆಡಳಿತದ ಚುಕ್ಕಾಣಿ ಹಿಡಿದು ತಂತ್ರಜ್ಞಾನದ ಕ್ರಾಂತಿಯನ್ನೇ ಮಾಡಿದರು. ಇಂದು ದೇಶದ ಎಲ್ಲ ನಾಗರಿಕರೂ ಕೈಯಲ್ಲೇ ಜಗತ್ತನ್ನು ನೋಡುವ ಸ್ಥಿತಿಗೆ ಅಂದಿನ ರಾಜೀವ್‌ಗಾಂಧಿ ಅವರ ಯೋಜನೆಯೇ ಕಾರಣ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂತಹ ಕ್ರಾಂತಿಕಾರಿ ಆಡಳಿತಗಾರ ರಾಜೀವ್‌ಗಾಂಧಿ ಅವರನ್ನು ತನ್ನ ತಾಯಿ ಹತ್ಯೆ ಏಳು ವರ್ಷದ ಅಂತರದಲ್ಲಿ ಈ ದೇಶದ ಎಲ್‌ಟಿಟಿ ಉಗ್ರರು ಕೊಂದು ಹಾಕಿದರು. ಬಳಿಕ ರಾಹುಲ್, ಸೋನಿಯಾ ಕುಟುಂಬ ಸುಧೀರ್ಘ ಕಾಲ ಅಜ್ಞಾತವಾಸ ಅನುಭವಿಸಬೇಕಾಯಿತು. ನಂತರ ಜಗತ್ತೇ ಮೆಚ್ಚುವ ಆರ್ಥಿಕ ತಜ್ಞ ಡಾ.ಮನ್‌ಮೋಹನ್‌ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡಿ 10 ವರ್ಷ ಈ ದೇಶದ ಆಡಳಿತ ನಡೆಸಿ ಎಲ್ಲ ವರ್ಗದ ಜನರಿಗೂ ಯೋಜನೆ ರೂಪಿಸಿದರು ಎಂದು ಹೇಳಿದರು.
ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಕೇಂದ್ರದಲ್ಲಿ 10 ವರ್ಷ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಶೋಷಿತ ವರ್ಗ ಮತ್ತು ತಳ ಸಮುದಾಯದ ಅಭಿವೃದ್ಧಿಗೆ ಯಾವುದೇ ಕೊಡುಗೆಯನ್ನೂ ನೀಡಿಲ್ಲ. ಶೇ.10ರಷ್ಟಿರುವ ಶ್ರೀಮಂತ ವರ್ಗದ ಆಸ್ತಿ ವೃದ್ಧಿಯಾಗಿದೆಯೇ ಹೊರತು ಶೋಷಿತ ವರ್ಗದವರ ಆದಾಯ 10 ವರ್ಷಗಳಿಗಿಂತ ಕೆಳಗಿದೆ ಎಂದು ಆರೋಪಿಸಿದರು.
ದೇಶದ 2.06 ಲಕ್ಷ ಗ್ರಾಪಂಗಳಿಗೆ ಇಂಟರ್‌ನೆಟ್ ಸೇವೆ ಒದಗಿಸುತ್ತೇವೆ ಎಂದು ಹೇಳಿದ್ದ ನರೇಂದ್ರಮೋದಿ, ಕೇವಲ 6322 ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಇಂಟರ್‌ನೆಟ್ ಸೇವೆ ನೀಡಿದೆ. ಇದು ಇವರ ಸಾಧನೆಯೇ?. ದೇಶದಲ್ಲಿ ಶೇ.72ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ದೇಶದಲ್ಲಿ 65 ವರ್ಷ ಆಡಳಿತ ನಡೆಸಿದ ವಿವಿಧ ಪಕ್ಷಗಳು 55 ಲಕ್ಷ ಕೋಟಿ ರೂ ಸಾಲ ಮಾಡಿದ್ದರೆ, ನರೇಂದ್ರ ಮೋದಿ ಅವರು ಅಧಿಕಾರ ಹಿಡಿದ ಕೇವಲ 10 ವರ್ಷದಲ್ಲಿ 1.55 ಲಕ್ಷ ಕೋಟಿ ರೂ ಸಾಲ ಮಾಡಿದ್ದಾರೆ. ಇದು ಎಲ್ಲಿಗೆ ಹೋಯಿತು. ಶಾಲೆ ಕಟ್ಟಲಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪ ನೀಡಲಿಲ್ಲ. ಈ ದೇಶದ ಸಾಮಾನ್ಯ ವರ್ಗ ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದಾರೆ. ಇದಕ್ಕೆ ಯಾವ ಯೋಜನೆಯನ್ನೂ ರೂಪಿಸಿಲ್ಲ ಎಂದು ಕಿಡಿಕಾರಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಲ್.ಪದ್ಮನಾಭ, ವಕ್ತಾರ ಟಿ.ಎಸ್.ಸತ್ಯಾನಂದ ಇದ್ದರು.