ಮೈತ್ರಿ ಸೋತರಷ್ಟೇ ಪ್ರಜಾಪ್ರಭುತ್ವದ ಉಳಿವು: ಸಾಹಿತಿ ದೇವನೂರ ಮಹಾದೇವ ಹೇಳಿಕೆ

Lok Sabha election literature Devanur Mahadev press conference Mandya
Published on

ಮಂಡ್ಯ: ಈ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷ ಸೋತರಷ್ಟೇ ಪ್ರಜಾಪ್ರಭುತ್ವ ಉಳಿಯಲಿದೆ. ಜತೆಗೆ ಬಹುತ್ವ ಭಾರತದ ಸಹನೆ, ಸಹಬಾಳ್ವೆ, ನ್ಯಾಯ ಸಮಾನತೆಯ ನಮ್ಮ ಪುರಾತನ ಧರ್ಮಗಳ ಸಂಸ್ಕೃತಿಯ ಉಳಿವು ಸಾಧ್ಯ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2047ರ ಹೊತ್ತಿಗೆ ಕನಸು ಕಾಣುತ್ತಿರುವ ವಿಕಸಿತ ಭಾರತ ಅಥವಾ ಹಿಂದುತ್ವ ಭಾರತ ಯಾವುದು ಎಂದರೆ ಮಾಜಿ ಶೂದ್ರರಾದ ಲಿಂಗಾಯತ, ಒಕ್ಕಲಿಗರಾದಿಯಾಗಿ ಉಳಿದೆಲ್ಲ ತಳಸಮುದಾಯಗಳನ್ನು ಮತ್ತೆ ಸೇವಕರನ್ನಾಗಿಸುವ ಹುನ್ನಾರ. ಇದು ಭಾರತಕ್ಕೆ ವಿಷವಿಕ್ಕಿದಂತೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಚಾತುರ್ವರ್ಣ ಸಮಾಜ ಉಂಟುಮಾಡುವುದೇ ದೇವರ ಸಾಕ್ಷಾತ್ಕಾರ ಎಂದು ಆರ್‌ಎಸ್‌ಎಸ್‌ನ ಗುರು ಗೋಲ್ವಾಲ್ಕರ್ ದಾಖಲು ಮಾಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಜನರು ಮೋದಿ ಅವರನ್ನು ನಂಬಿದಷ್ಟು ಬೇರೆ ಯಾರನ್ನೂ ನಂಬಲಿಲ್ಲ. ಆದರೆ ಮೋದಿ ಅವರಷ್ಟು ಜನರಿಗೆ ನಂಬಿಕೆ ದ್ರೋಹ ಮಾಡಿದವರು ಬೇರೆ ಯಾರೂ ಇಲ್ಲ. ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಇಡೀ ದೇಶದ ಜನರು ತನ್ನ ಕುಟುಂಬವೇ ಎಂದು ಭಾವಿಸಿ, ಆಗ ದೇಶದಲ್ಲಿ ಪ್ರಕ್ಷುಬ್ಧವಾಗಿದ್ದ ಕಾಶ್ಮೀರ, ಈಶಾನ್ಯ ರಾಜ್ಯಗಳು, ಪಂಜಾಬ್ ಮುಂತಾದ ರಾಜ್ಯಗಳ ಪ್ರಜೆಗಳು ತನ್ನ ಬಂಧುಗಳು ಎಂಬಂತೆ ಧಾವಿಸುತ್ತಿದ್ದರು. ತಮ್ಮ ಸರಳ, ನೇರ ಹೃದಯವಂತಿಕೆಯಿಂದ ಅವರ ಕಷ್ಟಸುಖ ಆಲಿಸುತ್ತಿದ್ದರು. ಸಾಂತ್ವನ ಮಾಡುತ್ತಿದ್ದರು. ಹೀಗೆ ಕ್ರಿಯಾಶೀಲರಾದ ಪ್ರಧಾನಿಗಳು ವಿರಳ. ಎಚ್.ಡಿ.ದೇವೇಗೌಡರು ತಮ್ಮ ಹತ್ತು ತಿಂಗಳ ಕಾಲಾವಧಿಯಲ್ಲಿ ಮಾಡಿದಷ್ಟು ಕಾರ್ಯಗಳನ್ನು, ಹತ್ತು ವರ್ಷ ಪ್ರಧಾನಿಯಾಗಿ ಕಾಲವ್ಯಯ ಮಾಡಿದ ಮೋದಿ ಅವರಿಗೆ ಸಾಧ್ಯವಾಗಲಿಲ್ಲ ಎಂದರು.

ನಮ್ಮ ಸಂವಿಧಾನದ ಪ್ರಕಾರ ಸಂಸತ್ ಸದಸ್ಯರು ಆಯ್ಕೆಯಾದ ನಂತರ ಬಹುಮತ ಪಡೆದ ಪಕ್ಷದ ಸಂಸದರು ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಹೀಗಿರುವಾಗ ಪ್ರಧಾನಿ ಅಭ್ಯರ್ಥಿಯನ್ನು ಚುನಾವಣೆಗೆ ಮೊದಲೇ ಘೋಷಣೆ ಮಾಡುವುದು ಸಂವಿಧಾನಕ್ಕೆ ಮಾಡುವ ಅಪಚಾರ. ಆದರೆ, ದೇವೇಗೌಡರು ಐಎನ್‌ಡಿಐಎ ಒಕ್ಕೂಟಕ್ಕೆ ಪ್ರಧಾನಿ ಅಭ್ಯರ್ಥಿ ಇಲ್ಲ ಎನ್ನುತ್ತಾರೆ. ಮೋದಿ ಅವರು ಪ್ರಾಮಾಣಿಕರು ಎಂದೂ ಹೇಳುತ್ತಾರೆ. ಅವರ ಮಾತುಗಳು ವ್ಯಂಗ್ಯವಾಗಿದ್ದರೆ ಚೆನ್ನಾಗಿರುತ್ತದೆ ಎಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ರಮೇಶ್, ಎಸ್.ಕೆ.ರವಿಕುಮಾರ್, ದೇವರಾಜು, ಲಿಂಗಪ್ಪಾಜಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net