ಲೋಕಸಭಾ ಚುನಾವಣೆಗೆ ಸಜ್ಜಾದ ಜಿಲ್ಲಾಡಳಿತ: ಕ್ಷೇತ್ರದ ಮತದಾರರೆಷ್ಟು, ನಾಮಪತ್ರ ಸಲ್ಲಿಕೆ ಯಾವಾಗ ಎಂಬಿತ್ಯಾದಿ ಮಾಹಿತಿ ಇಲ್ಲಿದೆ…!

Lok Sabha Election Information Mandya
Published on

ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆಯವನ್ನು ಜಿಲ್ಲೆಯಲ್ಲಿ ಮುಕ್ತ, ನ್ಯಾಯಸಮ್ಮತ, ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಸಿದ್ಧವಾಗಿದೆ. ಅಂತೆಯೇ ಮಾ.16ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18ನೇ ಲೋಕಸಭೆಗೆ ರಾಜ್ಯದಲ್ಲಿ ಎರಡು ಹಂತಗಳ ಚುನಾವಣೆ ನಡೆಯಲಿದೆ. ಈ ಪೈಕಿ ಮೊದಲ ಹಂತದಲ್ಲೇ ಅಂದರೆ ಏ.26ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಮತದಾನ ಇರಲಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ಮಂಡ್ಯ ಲೋಕಸಭಾ ಕ್ಷೇತ್ರವು 8 ಕ್ಷೇತ್ರವಿದೆ. ಚುನಾವಣೆ ಸಂಬಂಧ ಮಾ.28ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದರು.
ಮಾ.28ರಿಂದ ಏ.4ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಏ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಏ.8 ಕಡೆಯ ದಿನವಾಗಿದೆ. ಏ.26ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಸಮಯ ನಿಗದಿಯಾಗಿದೆ. ಜೂ.4ರಂದು ದೇಶಾದ್ಯಂದ ಒಂದೇ ಬಾರಿಗೆ ಮತ ಎಣಿಕೆ ನಡೆಯಲಿದೆ. 2024ರ ಜ.22ರಂದು ಹೊರಡಿಸಿದ ಅಂತಿಮ ಮತದಾರರ ಪಟ್ಟಿಯಂತೆ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 17,59,175 ಜನ ಮತದಾರರಿದ್ದಾರೆಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಚುನಾವಣಾ ತಹಸೀಲ್ದಾರ್ ವೆಂಕಟಾಚಲಪತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಎಸ್.ನಿರ್ಮಲಾ ಹಾಜರಿದ್ದರು.

ಚುನಾವಣಾಧಿಕಾರಿಗಳ ನೇಮಕ
ಜಿಲ್ಲಾ ಚುನಾವಣಾಧಿಕಾರಿಯಾಗಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರು ತಮಗೆ ಸಹಾಯಕ ಚುನಾಣಾಧಿಕಾರಿಯಾಗಿದ್ದಾರೆ. ಇವರೊಂದಿಗೆ ಆಯಾಯ ವಿಧಾನಸಭಾ ಕ್ಷೇತ್ರಗಳಿಗೆ ಒಬ್ಬೊಬ್ಬರು ಕೆಎಎಸ್ ಅಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿ ನೇಮಿಸಲಾಗಿದೆ.
ಮಳವಳ್ಳಿಯ ರಾಷ್ಟೀಯ ಹೆದ್ದಾರಿ-209(ಮಳವಳ್ಳಿ) ವಿಶೇಷ ಭೂಸ್ವಾಧೀನಾಧಿಕಾರಿ ನಹೀಧಾ ಜಮ್ ಜಮ್(ಮಳವಳ್ಳಿ), ಮಂಡ್ಯ ಮುಡಾ ಆಯುಕ್ತ ಆರ್.ಲೋಕನಾಥ್(ಮದ್ದೂರು), ಪಾಂಡವಪುರ ಉಪ ವಿಭಾಗಾಧಿಕಾರಿ ಜೆ.ಬಿ.ಮಾರುತಿ(ಮೇಲುಕೋಟೆ), ಮಂಡ್ಯ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್(ಮಂಡ್ಯ), ಜಿ.ಪಂ ಉಪ ಕಾರ್ಯದರ್ಶಿ ಕೆ.ಆನಂದ್‌ಕುಮಾರ್(ಶ್ರೀರಂಗಪಟ್ಟಣ), ಆಹಾರ ಇಲಾಖೆಯ ಉಪ ನಿರ್ದೇಶಕ ಎಂ.ಪಿ.ಕೃಷ್ಣಕುಮಾರ್(ನಾಗಮಂಗಲ), ಮಂಡ್ಯ ವಿಶ್ವವಿದ್ಯಾಲಯದ ರಿಜಿಸ್ಟರ್ ಆರ್.ಚಂದ್ರಯ್ಯ(ಕೆ.ಆರ್.ಪೇಟೆ), ಮೈಸೂರಿನ ಕಬಿನಿ ನೀರಾವರಿ ಜಲಾಶಯ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಬಿ.ಸುಪ್ರಿಯಾ ಬಾಣಗಾರ್(ಕೆ.ಆರ್.ನಗರ) ಅವರು ಸಹಾಯಕ ಚುನಾವಣಾಧಿಕಾರಿಗಳಾಗಿದ್ದಾರೆ.

  • 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಶೇ.40ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವವರಿರಿಗೆ ಮನೆಯಲ್ಲೇ ಮತದಾನ ಮಾಡಲು ಅವಕಾಶ. ಇದಲ್ಲದೆ ವಿವಿಧ ಸೇವಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 901 ಜನರು ಅಂಚೆ ಮತದಾನ ಮಾಡಲು ಸೌಲಭ್ಯ
  • ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 272, ಮದ್ದೂರಿನಲ್ಲಿ 254, ಮೇಲುಕೋಟೆಯಲ್ಲಿ 264, ಮಂಡ್ಯದಲ್ಲಿ 262, ಶ್ರೀರಂಗಪಟ್ಟಣದಲ್ಲಿ 249, ನಾಗಮಂಗಲದಲ್ಲಿ 260, ಕೃಷ್ಣರಾಜಪೇಟೆಯಲ್ಲಿ 261, ಕೆ.ಆರ್.ನಗರದಲ್ಲಿ 252 ಸೇರಿದಂತೆ ಕ್ಷೇತ್ರ ವ್ಯಾಪ್ತಿಯಲ್ಲಿ 2074 ಮತಗಟ್ಟೆಗಳನ್ನು ಗುರುತು
  • ಪ್ರಚಾರದಲ್ಲಿ ಮಕ್ಕಳು, ಪ್ರಾಣಿಗಳು, ಸೈನಿಕರ ಭಾವಚಿತ್ರ ಬಳಸುವಂತಿಲ್ಲ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.
  • ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಕಾರ್ಯಕ್ಕೆ ಸಂಬಂಧಿಸಿದಂತೆ ಅನುಮತಿ ಪಡೆಯಲು ಸುವಿಧಾ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅವುಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡಲಾಗುತ್ತದೆ.
  • ಮಳವಳ್ಳಿಯಲ್ಲಿ 18, ಮದ್ದೂರಿನಲ್ಲಿ 18, ಮೇಲುಕೋಟೆಯಲ್ಲಿ 17, ಮಂಡ್ಯದಲ್ಲಿ 20, ಶ್ರೀರಂಗಪಟ್ಟಣದಲ್ಲಿ 17, ನಾಗಮಂಗಲದಲ್ಲಿ 19, ಕೆ.ಆರ್.ಪೇಟೆಯಲ್ಲಿ 18, ಕೆ.ಆರ್.ನಗರದಲ್ಲಿ 24 ಸೇರಿದಂತೆ ಒಟ್ಟು 151 ಸೆಕ್ಟರ್ ಅಧಿಕಾರಿಗಳನ್ನು ನೇಮಕ.
  • ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಸಿ-ವಿಜಿಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದು. ದೂರದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು. ದೂರು ಬಂದ 100 ನಿಮಿಷಗಳೊಳಗೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಲು ಸಮಯ ನಿಗದಿಪಡಿಸಲಾಗಿದೆ.
  • ಮಳವಳ್ಳಿ, ಶ್ರೀರಂಗಪಟ್ಟಣ ಕ್ಷೇತ್ರಗಳಲ್ಲಿ ತಲಾ 5, ಮದ್ದೂರು, ನಾಗಮಂಗಲ, ಕೆ.ಆರ್.ನಗರ ಕ್ಷೇತ್ರಗಳಲ್ಲಿ ತಲಾ 4 ಹಾಗೂ ಕೆ.ಆರ್.ಪೇಟೆ ಕ್ಷೇತ್ರದಲ್ಲಿ 3 ಸೇರಿದಂತೆ 25 ಚೆಕ್‌ಪೋಸ್ಟ್ ನಿರ್ಮಾಣದ ಜತೆಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ

ಸಾರ್ವಜನಿಕರು 50 ಸಾವಿರ ರೂಗಿಂತ ಹೆಚ್ಚು ಹಣವನ್ನು ಸಾಗಾಣಿಕೆ ಮಾಡುವುದನ್ನು ಪರಿಶೀಲಿಸಲಾಗುವುದು. ಅಂತೆಯೇ 10 ಲಕ್ಷ ರೂಗಿಂತ ಹೆಚ್ಚು ಹಣವನ್ನು ಕೊಂಡೊಯ್ಯುವ ಪ್ರಕರಣಗಳ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ. ಇನ್ನು ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಲು ಕಂಟ್ರೋಲ್ ರೂಂ ತೆರೆಯಲಾಗಿದೆ. ಸಾರ್ವಜನಿಕರು ಟೋಲ್ ಫ್ರೀಂ ಸಂಖ್ಯೆ 1950ಗೆ ಕರೆ ಮಾಡಿ ದೂರು ನೀಡಬಹುದು. ಪ್ರತಿ ಅಭ್ಯರ್ಥಿಗೆ 95 ಲಕ್ಷ ರೂ ಚುನಾವಣಾ ವೆಚ್ಚ ಮಿತಿಯಿದೆ. ಅಭ್ಯರ್ಥಿಗಳ ಪ್ರತ್ಯೇಕ ಖಾತೆಗಳ ಮೂಲಕವೇ ಚುನಾವಣಾ ವೆಚ್ಚ ನಿರ್ವಹಣೆ ಮಾಡಬೇಕು.
ಡಾ.ಕುಮಾರ
ಜಿಲ್ಲಾಧಿಕಾರಿ

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂತೆಯೇ ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್ ಹಾಕಲಾಗಿದೆ. ಈಗಾಗಲೇ ಒಂದು ಸಿಆರ್‌ಪಿಎಫ್ ತುಕಡಿ ಜಿಲ್ಲೆಗೆ ಬಂದಿದೆ. ರೌಡಿ ಶೀಟರ್‌ಗಳಿಂದ ಬಾಂಡ್‌ಓವರಿಂಗ್ ಮಾಡಿಸಿಕೊಳ್ಳಲಾಗುತ್ತಿದೆ. ಸದ್ಯಕ್ಕೆ 8 ಜನ ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲು ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಲಾಗಿದೆ.
ಎನ್.ಯತೀಶ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net