

ಮಂಡ್ಯ: ಸಂಸತ್ ಚುನಾವಣೆಯ ಮಂಡ್ಯ ಅಖಾಡದಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವವರು ಯಾರೆನ್ನುವ ಪ್ರಶ್ನೆಗೆ ಸರಿಯಾದ ಉತ್ತರವೇ ಸಿಗುತ್ತಿಲ್ಲ. ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಖಾಡ ಪ್ರವೇಶಿಸುವುದು ಖಚಿತ ಎನ್ನುವ ಮಾತು ಕೇಳಿಬರುತ್ತಿವೆ. ಆದರೆ ಅಧಿಕೃತವಾಗುವವರೆಗೂ ಸ್ಪಷ್ಟತೆ ಇಲ್ಲದಂತಾಗಿದೆ. ಇನ್ನು ಇದಕ್ಕೆ ಕಾರಣವೂ ಇದೆ.
ಲೋಕಸಭಾ ಚುನಾವಣೆ ಜೆಡಿಎಸ್‌ನ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಮಂಡ್ಯ ತನ್ನ ಭದ್ರಕೋಟೆ ಎನ್ನುವುದನ್ನು ಸಾಬೀತುಪಡಿಸಲು ಗೆಲುವು ಅನಿವಾರ್ಯ. ಈ ನಿಟ್ಟಿನಲ್ಲಿ ಎಚ್‌ಡಿಕೆ ಅವರೇ ಸ್ಪರ್ಧೆ ಮಾಡಬೇಕೆಂಬುದು ಪಕ್ಷದ ನಾಯಕರು, ಕಾರ್ಯಕರ್ತರ ಸ್ಪಷ್ಟ ನುಡಿ. ಆದರೆ ಇದು ಮತ್ತೊಂದು ರೀತಿ ಸಮಸ್ಯೆಗೆ ಎಡೆ ಮಾಡಿಕೊಟ್ಟಿದೆ. ಅದೆಂದರೆ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧೆ ಮಾಡುವುದಕ್ಕೆ ರಾಮನಗರ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಒಪ್ಪುತ್ತಿಲ್ಲ. ಇದರಿಂದಾಗಿ ಎಚ್‌ಡಿಕೆ ಅಡಕತ್ತರಿಗೆ ಸಿಲುಕಿಕೊಳ್ಳುವಂತಾಗಿದೆ.
ಸಂಸತ್ ಸಮರ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್‌ನೊಳಗೆ ದಿನಕ್ಕೊಂದು ರೀತಿ ಬೆಳವಣಿಗೆ ನಡೆಯುತ್ತಿವೆ. ಮೈತ್ರಿ ಒಪ್ಪಂದದಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಸಿಗಲಿದೆ ಎನ್ನುವುದು ಹಂತ ಹಂತವಾಗಿ ಸ್ಪಷ್ಟವಾಗ ತೊಡಗಿತು. ಆದರೆ ಇದು ಅಧಿಕೃತಗೊಳಬೇಕಿದೆ ಅಷ್ಟೇ. ಇನ್ನು ಸ್ಪರ್ಧೆ ವಿಚಾರಕ್ಕೆ ಬರುವುದಾದರೆ ಪ್ರಾರಂಭದಲ್ಲಿ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಹಾಗೂ ಡಿ.ಸಿ.ತಮ್ಮಣ್ಣ ಹೆಸರು ಚಾಲ್ತಿಗೆ ಬಂತು. ಇದಾದ ಬಳಿಕ ಆಯೋಜಿಸಿದ ಕಾರ್ಯಕರ್ತರ ಸಭೆಯಲ್ಲಿ ಸ್ಥಳೀಯ ಅಭ್ಯರ್ಥಿಯ ಹೆಸರೇ ಪ್ರಸ್ತಾಪವಾಗಲಿಲ್ಲ. ಬದಲಿಗೆ ಎಚ್‌ಡಿಕೆ ಅಥವಾ ನಿಖಿಲ್ ಸ್ಪರ್ಧೆ ಮಾಡಬೇಕೆನ್ನುವ ಕೂಗು ಜೋರಾಯಿತು. ಇದಕ್ಕೆ ಎಚ್‌ಡಿಕೆ ಕೂಡ ಸಮ್ಮತಿ ಸೂಚಿಸಿದ್ದರು. ಈ ನಡುವೆ ಕುಮಾರಸ್ವಾಮಿ ಅಖಾಡಕ್ಕೆ ಇಳಿಯುವುದು ಖಚಿತ ಎನ್ನುವ ಮಾತು ಕೇಳಿಬಂತು. ಆದರೀಗ ರಾಮನಗರ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು, ಮಂಡ್ಯದಿಂದ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂ. ಗ್ರಾಮಾಂತರಕ್ಕೂ ಎಫೆಕ್ಟ್
ಮಂಡ್ಯದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಚನ್ನೈನಲ್ಲಿ ಶಸ್ತ್ರಚಿಕಿತ್ಸೆಗೆ ತೆರಳುವ ಮುನ್ನ ಕಾರ್ಯಕರ್ತರು ಎಚ್‌ಡಿಕೆ ಅವರನ್ನು ಭೇಟಿ ಮಾಡಿದ್ದಾರೆ. ಮಾತ್ರವಲ್ಲದೆ ಯಾವುದೇ ಕಾರಣಕ್ಕೂ ರಾಮನಗರ ಜಿಲ್ಲೆಯಿಂದ ಬೇರೆಡೆ ಸ್ಪರ್ಧೆ ಮಾಡಬಾರದು. ಒಂದು ವೇಳೆ ಇದನ್ನು ಮೀರಿ ಮಂಡ್ಯಕ್ಕೆ ಹೋದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಟಸ್ಥರಾಗಿ ಉಳಿಯುತ್ತೇವೆ. ಚುನಾವಣೆ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಬಂದ ನಂತರ ನಿರ್ಧಾರ ಮಾಡುವುದಾಗಿ ಭರವಸೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ. ಇನ್ನು ಕಾರ್ಯಕರ್ತರ ನಡೆ ಎಚ್‌ಡಿಕೆ ಅವರನ್ನು ಇಕ್ಕಟ್ಟಿಗೆ ಸಿಲುಕಿದೆ. ಕಾರಣ, ರಾಮನಗರದ ಕಾರ್ಯಕರ್ತರ ಮಾತನ್ನು ಮೀರಿದರೆ ಬೆಂ.ಗ್ರಾಮಾಂತರ ಚುನಾವಣೆಯನ್ನು ಹಿನ್ನಡೆಯಾಗಬಹುದು. ಜತೆಗೆ ಒಂದು ವೇಳೆ ಮಂಡ್ಯದಿಂದ ಗೆದ್ದರೆ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡಬೇಕಾಗುತ್ತದೆ ಎನ್ನುವ ಲೆಕ್ಕಾಚಾರವಿದೆ.
ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ಮಂಡ್ಯದಿಂದ ಸ್ಪರ್ಧೆ ಮಾಡಿಸುವ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ ಒಂದು ಬಾರಿ ಸೋಲು ಕಂಡಿರುವುದರಿಂದ ಅನುಕಂಪದ ಅಲೆ ಇದೆ. ಜತೆಗೆ ನಾಯಕರು ಹಾಗೂ ಕಾರ್ಯಕರ್ತರು ಕೂಡ ನಿಖಿಲ್‌ಗೆ ಆಹ್ವಾನ ನೀಡಿರುವುದರಿಂದ ಮಹತ್ವದ ನಿರ್ಧಾರ ತೆಗೆದುಕೊಂಡರೂ ಅಚ್ಚರಿ ಪಡುವಂತಿಲ್ಲ. ಮತ್ತೊಂದೆಡೆ ಅಭ್ಯರ್ಥಿಯನ್ನು ಘೋಷಿಸಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಕೂಡ ಮೈತ್ರಿ ಅಭ್ಯರ್ಥಿ ಯಾರೆನ್ನುವ ಬಗ್ಗೆ ಗಮನವಿಟ್ಟಿದ್ದಾರೆ. ಒಟ್ಟಾರೆ ಮಂಡ್ಯ ಚುನಾವಣಾ ಕಣ ಕಾವೇರುತ್ತಿರುವುದರಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಯಾರೆನ್ನುವ ಕುತೂಹಲಕ್ಕೆ ಮಾ.25ರಂದು ತೆರೆಬೀಳಲಿದೆ.