

ಮಂಡ್ಯ: ‘ಮಳೆ ನಿಂತರೂ ಹನಿ ನಿಂತಿಲ್ಲ’ ಎನ್ನುವ ಗಾದೆಯಂತಾಗಿದೆ ಮಂಡ್ಯದ ಪರಿಸ್ಥಿತಿ. ಜಿದ್ದಾಜಿದ್ದಿ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ಪೂರ್ಣಗೊಂಡಿದೆ. ಆದರೆ, ಯಾರು ಗೆಲ್ಲುತ್ತಾರೆಂಬ ಪ್ರಶ್ನೆ ಎಲ್ಲಿ ಹೋದರೂ ಕೇಳಿಬರುತ್ತಿದೆ. ಜಿಲ್ಲೆಯ ಹೋಟೆಲ್, ಬಸ್‌ಸ್ಟಾೃಂಡ್, ಸಾರ್ವಜನಿಕ ಸ್ಥಳ ಸೇರಿ ಸಾಮಾಜಿಕ ಜಾಲತಾಣದಲ್ಲಿ ಇಂತಹದೊಂದು ಪ್ರಶ್ನೆಗೆ ಉತ್ತರ ಹುಡುಕಲು ಪ್ರಾರಂಭಿಸಲಾಗಿದೆ.
ಹೈವೋಲ್ಟೆಜ್ ಕ್ಷೇತ್ರ: ಹೈವೋಲ್ಟೆಜ್ ಕ್ಷೇತ್ರವಾಗಿದ್ದ ಮಂಡ್ಯ ಜಿಲ್ಲೆ ಇದೀಗ ತಣ್ಣಗಾಗಿದೆ. ರಾಜಕೀಯದ ಕಾವು ಇಳಿದು ಸಹಜ ಸ್ಥಿತಿಗೆ ಮರಳಿದೆ. ಕಳೆದ ಕೆಲ ದಿನಗಳಿಂದ ಅಬ್ಬರದ ಪ್ರಚಾರ, ಟೀಕೆ, ಪ್ರತಿ ಟೀಕೆ, ಅಭಿಮಾನ, ಸ್ವಾಭಿಮಾನ, ನಾಟಿ, ಹೈಬ್ರಿಡ್, ಆರೋಪ, ಪ್ರತ್ಯಾರೋಪದಿಂದಾಗಿ ಮಂಡ್ಯ ಕ್ಷೇತ್ರ ರಂಗು ಪಡೆದುಕೊಂಡಿತ್ತಲ್ಲದೆ, ರಾಜ್ಯದ ಗಮನ ಸೆಳೆದಿತ್ತು.
ಕಾರಣ ಎರಡು ಬಾರಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಹಾಗೂ ಚುನಾವಣಾ ರಾಜಕೀಯದ ಪ್ರಾಥಮಿಕ ಹಂತದಲ್ಲಿರುವ ಸ್ಟಾರ್ ಚಂದ್ರು ಸ್ಪರ್ಧೆ. ಮೇಲ್ನೋಟಕ್ಕೆ ಇವರಿಬ್ಬರ ನಡುವೆ ಸ್ಪರ್ಧೆ ನಡೆದಿದೆ ಎಂದಾದರೂ ನಿಜವಾಗಿ ಎಚ್‌ಡಿಕೆ ವರ್ಸಸ್ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಪ್ರತಿಷ್ಠೆ ಕಣವಾಗಿದೆ. ಸತತವಾಗಿ ಚುನಾವಣೆಗಳಲ್ಲಿ ಸೋಲು ಕಂಡಿರುವ ಜೆಡಿಎಸ್‌ಗೆ ಈ ಲೋಕಸಭಾ ಚುನಾವಣೆ ಅಸ್ತಿತ್ವದ ಪ್ರಶ್ನೆ. ಈ ಕಾರಣಕ್ಕೆ ಮಾಜಿ ಸಿಎಂ ಅವರೇ ಅಖಾಡ ಪ್ರವೇಶಿಸಿದರು. ಇತ್ತ ಜೆಡಿಎಸ್‌ಗೆ ಜಿಲ್ಲೆಯಲ್ಲಿ ದೊಡ್ಡಮಟ್ಟದ ಹೊಡೆತ ನೀಡಲು ಕಾಂಗ್ರೆಸ್ ಕೂಡ ತಂತ್ರಗಾರಿಕೆ ನಡೆಸಿತು. ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಹಾಗೂ ಇಬ್ಬರು ಎಂಎಲ್‌ಸಿಗಳಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್ ಬಲಿಷ್ಠವಾಗಿ ಕಾಣಿಸಿತು.
ಇನ್ನು ಜೆಡಿಎಸ್-ಬಿಜೆಪಿ ಮೈತ್ರಿ ಕ್ಷೇತ್ರದಲ್ಲಿ ವರ್ಕೌಟ್ ಆದಂತೆ ಕಾಣಿಸುತ್ತಿದೆ. ಎರಡೂ ಪಕ್ಷದ ನಾಯಕರ ನಡುವೆ ಮನಸ್ತಾಪ ಕಂಡುಬರಲಿಲ್ಲ. ಬಿಜೆಪಿಯ ಘಟಾನುಘಟಿ ನಾಯಕರೇ ಖುದ್ದು ಎಚ್‌ಡಿಕೆ ಪರ ಪ್ರಚಾರ ನಡೆಸಿದ್ದಾರೆ. ಈ ನಡುವೆ ಸಂಸದೆ ಸುಮಲತಾ ಪ್ರಚಾರಕ್ಕೆ ಬರಲಿಲ್ಲ. ಮೇಲ್ನೋಟಕ್ಕೆ ಎಲ್ಲವೂ ಸರಿ ಎಂದುಕೊಂಡಿದ್ದರೂ ಇದು ನಿರೀಕ್ಷಿತವೇ ಆಗಿತ್ತು. ಜೆಡಿಎಸ್‌ಗೆ ಬಿಜೆಪಿಯ ಬೆಂಬಲ ್ಲಸ್ ಆಗಿದೆ. ಬಿಜೆಪಿಯ ಸಾಂಪ್ರದಾಯಿಕ ಮತಗಳು ಎಚ್‌ಡಿಕೆಗೆ ವರದಾನವಾಗಿದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿ ಪರ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ತಂಡ ಭರ್ಜರಿಯಾಗಿಯೇ ಕ್ಯಾಂಪೇನ್ ಮಾಡಿತು.
ಕ್ಷೇತ್ರದಲ್ಲಿ ಕಾಂಗ್ರೆಸ್ ಹಲವು ಸಭೆಗಳನ್ನು ಮಾಡಿ ಶಕ್ತಿ ಪ್ರದರ್ಶನ ಮಾಡಿತು. ಇತ್ತ ಎಚ್‌ಡಿಕೆ ನೇತೃತ್ವದಲ್ಲಿ ಪ್ರತಿ ಕ್ಷೇತ್ರದಲ್ಲಿ ಒಂದೊಂದು ಬಹಿರಂಗ ಸಮಾವೇಶ ಮಾಡಿ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಿತು. ಒಟ್ಟಾರೆ, ಇಷ್ಟು ದಿನದ ರಂಗೇರಿದ ಕಣವಾಗಿದ್ದ ಮಂಡ್ಯದಲ್ಲಿ ಮತದಾನ ಮುಗಿದಿದೆ. ಇನ್ನೇನಿದ್ದರೂ ಫಲಿತಾಂಶಕ್ಕೆ ಹಲವು ದಿನ ಕಾಯಲೇಬೇಕಿದ್ದು, ಫಲಿತಾಂಶದ ಬಗೆಗಿನ ಕುತೂಹಲ ಎಲ್ಲರಿಗೂ ಇದೆ.
ನಾಯಕರಿಗೆ ಗೆಲುವಿನ ಚಿಂತೆ, ಕಾರ್ಯಕರ್ತರಿಗೆ ಲೀಡ್ ಯೋಚನೆ
ಮತದಾನದ ಬಳಿಕ ಗೆಲುವಿನ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿವೆ. ಅಂತೆಯೇ ಕಾಂಗ್ರೆಸ್‌ಗೆ ಗ್ಯಾರಂಟಿ ಯೋಜನೆ, ಅಹಿಂದ ಮತಗಳು ಕೈಹಿಡಿದಿವೆ ಎನ್ನುವ ಸಂಪೂರ್ಣ ಭರವಸೆ ಇದೆ. ಆದ್ದರಿಂದ ಕನಿಷ್ಠ 50 ಸಾವಿರ ಮತಗಳ ಅಂತರದಲ್ಲಿಯಾದರೂ ಗೆಲ್ಲುತ್ತೇವೆನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆದಾಗ್ಯೂ ಕಾವೇರಿ ನೀರಿನ ವಿಷಯದ ಜತೆಗೆ ಒಕ್ಕಲಿಗ, ಲಿಂಗಾಯತ ಸೇರಿದಂತೆ ಕೆಲ ಸಮುದಾಯ ಮೈತ್ರಿ ಬೆಂಬಲಕ್ಕೆ ನಿಂತಿವೆ ಎನ್ನುವ ಆತಂಕವೂ ಇದೆ.
ಇತ್ತ ಜೆಡಿಎಸ್‌ಗೂ ಅಚಲ ವಿಶ್ವಾಸವಿದ್ದು, ಕನಿಷ್ಠ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಶತಃಸಿದ್ಧ ಎನ್ನುತ್ತಿದೆ. ಮೈತ್ರಿ ಕಾರ್ಯಕರ್ತರು ಚುನಾವಣೆ ಯಶಸ್ವಿಯಾಗಿ ಮಾಡಿದ್ದಾರೆ. ಜತೆಗೆ ಕಾಂಗ್ರೆಸ್ ವಿರುದ್ಧವಿರುವ ಸಮುದಾಯದ ಬೆಂಬಲ ಮೈತ್ರಿಗೆ ಸಿಕ್ಕಿದೆ ಎನ್ನುವ ಭರವಸೆ ಇದೆ. ಇದರೊಟ್ಟಿಗೆ ಎನ್‌ಡಿಎ ಅಧಿಕಾರಕ್ಕೆ ಬಂದರೆ ಎಚ್‌ಡಿಕೆ ಕೇಂದ್ರ ಸಚಿವರಾಗುತ್ತಾರೆನ್ನುವ ಮಾತು ್ಲಸ್ ಆಗಿದೆ. ಅವಲ್ಲದೆ ಕಾಂಗ್ರೆಸ್ ಪ್ರಬಲವಾಗಿ ನಿರೀಕ್ಷೆ ಇಟ್ಟುಕೊಂಡಿರುವ ಮಳವಳ್ಳಿ ಹಾಗೂ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿಯೂ ಮೈತ್ರಿ ಮೇಲುಗೈ ಸಾಧಿಸಲಿದೆ ಎನ್ನುವ ನಂಬಿಕೆಯನ್ನು ನಾಯಕರು, ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈಗಾಗಲೇ ಬೆಟ್ಟಿಂಗ್ ಭರಾಟೆಯೂ ಜೋರಾಗಿದೆ. ಗೆಲುವಿನ ಮಾತ್ರವಲ್ಲದೆ ಲೀಡ್ ವಿಚಾರದಲ್ಲಿಯೂ ಹಣಕಾಸಿನ ವ್ಯವಹಾರ ನಡೆಯುತ್ತಿದೆ ಎನ್ನಲಾಗುತ್ತಿದೆ. ಪ್ರಮುಖವಾಗಿ ಮಳವಳ್ಳಿ, ಮದ್ದೂರು ಹಾಗೂ ನಾಗಮಂಗಲ ಕ್ಷೇತ್ರದಲ್ಲಿ ಲೀಡ್ ವಿಚಾರ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಎರಡೂ ಪಕ್ಷದ ಕಾರ್ಯಕರ್ತರು ಪಟ್ಟು ಬಿಡುತ್ತಿಲ್ಲ.
ಹೊರ ಜಿಲ್ಲೆಯವರಿಗೂ ಕುತೂಹಲ: ಮಂಡ್ಯ ಕ್ಷೇತ್ರದ ಚುನಾವಣಾ ಫಲಿತಾಂಶ ಕ್ಷೇತ್ರದವರಿಗಷ್ಟೇ ಅಲ್ಲದೆ, ಹೊರ ಜಿಲ್ಲೆಯ ಜನರಲ್ಲಿಯೂ ಕುತೂಹಲ ಹೆಚ್ಚಿಸಿದೆ. ಮತದಾನದ ದಿನವೂ ಸರಾಸರಿ ಮತದಾನ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮಾಧ್ಯಮವರಿಗೆ ಕರೆ ಮಾಡುತ್ತಿದ್ದರು. ಅಲ್ಲದೆ ಸ್ನೇಹಿತರು, ಸಂಬಂಧಿಕರು, ಮಾಧ್ಯಮದವರಿಗೆ ಕರೆ ಮಾಡಿ ಫಲಿತಾಂಶ ಏನಾಗಬಹುದೆಂಬ ಪ್ರಶ್ನೆಗಳನ್ನು ಕೇಳುತ್ತಿದ್ದರು.