ಜಿಲ್ಲೆಯಲ್ಲಿ ಏ.26ಕ್ಕೂ ಮುನ್ನವೇ ಮೂರು ದಿನ ನಡೆಯಲಿದೆ ಮತದಾನ: ಎಷ್ಟು ಜನರಿಗೆ ಮತ ಚಲಾಯಿಸುವ ಅವಕಾಶ ಸಿಕ್ಕಿದೆ ಗೊತ್ತಾ?

Lok Sabha Election DC press conference Mandya
Published on

ಮಂಡ್ಯ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಮತದಾರರ ಪಟ್ಟಿ ಪರಿಷ್ಕರಣೆಯಾಗಿದೆ. ಅದರಂತೆ ಹೊಸದಾಗಿ 20,064 ಮತದಾರರು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದು, ಇದರೊಂದಿಗೆ ಒಟ್ಟು ಸಂಖ್ಯೆ 17,79,239ಕ್ಕೇರಿದೆ. ಅಂತೆಯೇ ಇದೇ ಪಟ್ಟಿ ಅಂತಿಮ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಜ.22ರಂದು ಹೊರಡಿಸಿದ ಅಂತಿಮ ಮತದಾರರ ಪಟ್ಟಿಯಂತೆ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8,67,652 ಪುರುಷರು ಹಾಗೂ 8,91,355 ಮಹಿಳೆಯರು, 168 ಜನ ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ 17,59,175 ಮತದಾರರಿದ್ದರು. ಪರಿಷ್ಕರಣೆ ಬಳಿಕ 8,460 ಪುರುಷರು, 11,604 ಮಹಿಳಾ ಮತದಾರರ ಹೆಸರು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದೆ ಎಂದು ಹೇಳಿದರು.

ಹೊಸದಾಗಿ ನೋಂದಣಿಯಾದ ಮತದಾರರ ಪೈಕಿ 13,188 ಜನರ ಎಫಿಕ್ ಕಾರ್ಡ್‌ಗಳನ್ನು ಅಂಚೆ ಮೂಲಕ ಕಳುಹಿಸಲಾಗಿದೆ. ಜಿಲ್ಲೆ ವ್ಯಾಪ್ತಿಯ 15,60,453 ಜನರಿಗೆ ನೀಡಲು ಈಗಾಗಲೇ ವೋಟರ್ ಸ್ಲಿಪ್‌ಗಳನ್ನು ಮುದ್ರಿಸಲಾಗಿದ್ದು, ಅವುಗಳನ್ನು ಮತದಾನಕ್ಕೆ ಎರಡು ದಿನ ಮುಂಚಿತವಾಗಿ ಗ್ರಾಮ ಆಡಳಿತಾಧಿಕಾರಿ/ಗ್ರಾಮ ಸಹಾಯಕ/ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ಮತದಾರರ ಮನೆಮನೆಗೆ ತಲುಪಿಸಲಾಗುವುದು. ಪ್ರಜಾಪ್ರಭುತ್ವದ ಮತದಾನದ ಹಬ್ಬಕ್ಕೆ ಆಮಂತ್ರಣ ಪತ್ರಗಳನ್ನು ಪ್ರತಿ ಕುಟುಂಬಕ್ಕೆ ಈ ಚುನಾವಣೆಯಲ್ಲಿ ವಿತರಿಸಲಾಗುತ್ತಿದೆ. ವೋಟರ್‌ಸ್ಲಿಪ್‌ನೊಂದಿಗೆ ಆಮಂತ್ರಣ ಪತ್ರವನ್ನು ಕಳುಹಿಸಿಕೊಡಲಾಗುವುದು. ಪ್ರತಿ ಅರ್ಹ ಮತದಾರರು ತಪ್ಪದೇ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು. ಚುನಾವಣೆ ನಡೆಯುವ ಏ.26ರಂದು ಜಿಲ್ಲೆಯಲ್ಲಿ ನಡೆಯುವ ಎಲ್ಲ ಸಂತೆ, ಜಾತ್ರೆ ಹಾಗೂ ಉತ್ಸವಗಳನ್ನು ಮುಂಜಾಗ್ರತಾ ಕ್ರಮವಾಗಿ ನಿಷೇಧಿಸಲಾಗಿದೆ ಎಂದು ವಿವರಿಸಿದರು.

ಇನ್ನು ಒಟ್ಟು ಮತದಾರರಲ್ಲಿ 23,044 ಜನ 85ಕ್ಕಿಂತ ಹೆಚ್ಚು ವಯಸ್ಸಿನವರು ಹಾಗೂ 25,673 ಜನ ಅಂಗವಿಕಲ ಮತದಾರರಿದ್ದಾರೆ. ಇಷ್ಟೂ ಜನರಿಗೆ ಮನೆಯಿಂದಲೇ ಮತದಾನ ಮಾಡಲು ಅನುಕೂಲವಾಗುವಂತೆ ಫಾರ್ಮ್ 12ಡಿ ವಿತರಿಸಲಾಗಿದೆ. ಶೇ.40ರಷ್ಟು ಅಂಗವಿಕಲತೆ ಹೊಂದಿದವರಿಗೆ ಮಾತ್ರ ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ 2569 ಜನರಿಗೆ 85 ವರ್ಷ ಮೇಲ್ಪಟ್ಟವರು, 1075 ಜನ ಅಂಗವಿಕಲರು ಮನೆಯಲ್ಲೇ ಮತದಾನ ಮಾಡಲು ಅನುಮತಿ ಪಡೆದಿದ್ದಾರೆ. ಇವರಿಗೆ ಏ.16, 17 ಮತ್ತು 18ರಂದು ಮತದಾನ ಮಾಡಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸ್ಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಅಬಕಾರಿ ಇಲಾಖೆ ಉಪ ಆಯುಕ್ತ ವಿ.ರವಿಶಂಕರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net