ವೈಮನಸ್ಸು ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಶಾಸಕ ರವಿಕುಮಾರ್ ಗಣಿಗ ಮನವಿ

Lok Sabha election congress workers meeting mandya
Published on

ಮಂಡ್ಯ: ಊರಿನಲ್ಲಿ ಸಣ್ಣಪುಟ್ಟ ವೈಮನಸ್ಸು ಬಿಟ್ಟು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಕಾರ್ಯಕರ್ತರಿಗೆ ಶಾಸಕ ರವಿಕುಮಾರ್ ಗಣಿಗ ಮನವಿ ಮಾಡಿದರು.

ತಾಲೂಕಿನ ಬಸರಾಳು ಗ್ರಾಮದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ 15 ಸಾವಿರ ಜನ ಸೇರಿದ್ದಿರಿ. ಆದರೆ ಬೂತ್ ತೆಗೆದಾಗ 500 ಮತ ಜೆಡಿಎಸ್‌ಗೆ ಹೆಚ್ಚು ಇತ್ತು. ನನಗೆ ಬಹಳ ಬೇಸರವಾಗಿತ್ತು. ನೇರವಾಗಿ ಕೇಳಿಕೊಳ್ಳುತ್ತಿದ್ದೇನೆ, ನಮ್ಮನ್ನು ನಂಬಿ ಬಂದಿರುವ ಸ್ಟಾರ್ ಚಂದ್ರು ಅವರನ್ನು ಕೈಬಿಡಬೇಡಿ. ನಮ್ಮ ಮತ್ತು ನಿಮ್ಮ ಉಳಿವಿಗಾಗಿ ಕಾಂಗ್ರೆಸ್ ಗೆಲ್ಲಲೇಬೇಕು ಎಂದರು.

ಶಾಸಕನಾದ ಮೇಲೆ ಬಸರಾಳು ಹೋಬಳಿಯಲ್ಲಿ ಎಂಟು ತಿಂಗಳಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬಸರಾಳು-ಮುತ್ತೇಗೆರೆ ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ ಟೆಂಡರ್ ಆಗಿದೆ. ಹುನುಗನಹಳ್ಳಿ-ನಂದಹಳ್ಳಿ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ ಟೆಂಡರ್ ಆಗಿದೆ. ಹಲವಾರು ವರ್ಷದಿಂದ ಬೇಸಿಗೆಯಲ್ಲಿ ಕೆರೆ ಕಟ್ಟೆ ತುಂಬಿಸಲು ಆಗುತ್ತಿರಲಿಲ್ಲ. ಈ ಬಾರಿ ಹೇಮಾವತಿ, ಗೊರೂರು ಜಲಾಶಯದಿಂದ ಬಸರಾಳು ಭಾಗದ ಕೆರೆ ಕಟ್ಟೆಗಳನ್ನು ತುಂಬಿಸಲಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ನುಡಿದಂತೆ ನಡೆದ ಸರ್ಕಾರ ನಮ್ಮದು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ನಾಯಕರು ಒಮ್ಮತದಿಂದ ಮಂಡ್ಯ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಹೆಸರನ್ನ ತಿಳಿಸಿದ್ದಾರೆ. ಅವರಿಗೆ ಎಲ್ಲರೂ ಆರ್ಶೀವಾದ ಮಾಡಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ಎಚ್.ಬಿ.ರಾಮು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಸಂಭಾವ್ಯ ಅಭ್ಯರ್ಥಿ ಸ್ಟಾರ್ ಚಂದ್ರು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಖಂಡರಾದ ಸಿದ್ಧಾರೂಢ ಸತೀಶ್‌ಗೌಡ, ಚಿಕ್ಕಬಳ್ಳಿ ಕೃಷ್ಣ, ಕಂಬದಹಳ್ಳಿ ಪುಟ್ಟಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net