ಲೋಕಸಭಾ ಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Lok Sabha election Congress meeting mandya
Published on

ಮಂಡ್ಯ: ಮುಂಬರುವ ಲೋಕಸಭೆ ಚುನಾವಣೆ ನಮಗೆ ಅತ್ಯಂತ ಪ್ರತಿಷ್ಠೆಯಾಗಿದೆ. 20ರಿಂದ 22 ಸ್ಥಾನಗಳನ್ನು ನಾವು ಗೆಲ್ಲಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಲೋಕಸಭೆ ಚುನಾವಣೆ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ಕ್ಷೇತ್ರವನ್ನಂತೂ ಗೆಲ್ಲಲೇಬೇಕು. ನಿಜಕ್ಕೂ ಮಂಡ್ಯ ಗೆಲುವು ದೆಹಲಿ ತಲುಪಲಿದೆ. ಜೀವನದಲ್ಲಿ ಸಾರ್ಥಕತೆ ತಂದುಕೊಡುವ ಗೆಲುವಾಗಲಿದೆ. ಮುಂದಿನ ನಾಲ್ಕು ತಿಂಗಳಲ್ಲಿ ನಾಲ್ಕು ವರ್ಷಗಳ ಭವಿಷ್ಯವಿದೆ. ಇದಕ್ಕಾಗಿ ಇಂದಿನಿಂದಲೇ ಚುನಾವಣೆಗೆ ಸಜ್ಜಾಗಿ ಎಂದು ಕರೆ ನೀಡಿದರು.

ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ನಾಮನಿರ್ದೇಶನಗಳ ಪ್ರಕ್ರಿಯೆಯು ಫೆ.10ರೊಳಗೆ ಪೂರ್ಣಗೊಳ್ಳಲಿದೆ. ಈ ಮೂಲಕ ಪಕ್ಷಕ್ಕಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುವುದು. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಏಳೆಂಟು ತಿಂಗಳಾಗಿದೆ. ಪಕ್ಷಕ್ಕಾಗಿ ದುಡಿದ ನಮಗೆ ಏನೂ ಸಿಕ್ಕಿಲ್ಲವೆಂದು ನೊಂದುಕೊಳ್ಳುವುದು ಬೇಡ. ನಿಮಗೆ ನೋವು ಮಾಡುವುದಿಲ್ಲ. ಸಿಕ್ಕ ಅಧಿಕಾರದಲ್ಲಿ ತೃಪ್ತಿ ಪಡಿ ಎಂದು ಹುರಿದುಂಬಿಸಿದರು.

ಹಾಗೆಯೇ ಎಲ್ಲರಿಗೂ ಒಂದೇ ಬಾರಿಗೆ ಅಧಿಕಾರದ ಅವಕಾಶ ಕೊಡಲಾಗದು. 1 ರಿಂದ 2 ವರ್ಷಗಳ ಸೀಮಿತ ಅವಧಿಗಳಿಗೆ ನಾಮನಿರ್ದೇಶನಗಳನ್ನು ಮಾಡಲಾಗುತ್ತದೆ. ಅವರ ಬಳಿಕ ಉಳಿದವರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲಿವರೆಗೆ ಸ್ವಲ್ಪ ಕಾಯುವುದು ಅನಿವಾರ್ಯ. ಸಾಹುಕಾರ್ ಚನ್ನಯ್ಯ ಅವರು ಸಮರ್ಥರಾಗಿದ್ದರೂ ಮುಖ್ಯಮಂತ್ರಿ ಆಗಲೇ ಇಲ್ಲ. ಎಚ್.ಡಿ.ಚೌಡಯ್ಯ ಅವರಿಗೆ ಸಚಿವಗಿರಿ ಸಿಗಲಿಲ್ಲ. ಎ.ಸಿ.ಶ್ರೀಕಂಠಯ್ಯ ಅವರು ಆರೇಳು ಬಾರಿ ಚುನಾವಣೆಗೆ ಸ್ಪರ್ಧಿಸಿದರೂ ಶಾಸಕರಾಗಲೇ ಇಲ್ಲ. ಹಣೆಬರಹ, ಸಮಯ, ಸಂದರ್ಭ ಎಲ್ಲವೂ ಕೂಡಿ ಬರಬೇಕು. ಕಾರ್ಯಕರ್ತರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಪಕ್ಷ ಕಾಂಗ್ರೆಸ್. ಅಧಿಕಾರಕ್ಕೆ ಬಂದು ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ಮೊದಲು ಜನರ ಕೆಲಸ ಮಾಡಲಾಯಿತು. ಇಲ್ಲದಿದ್ದರೆ ಜನರು ಕಾರ್ಯಕರ್ತರು, ಮುಖಂಡರನ್ನು ಬೈಯುತ್ತಿದ್ದರು. ಈಗ ಜನ ಸಮಾಧಾನರಾಗಿದ್ದಾರೆ. ಇನ್ನೇನಿದ್ದರೂ ಕಾರ್ಯಕರ್ತರ ಸರದಿ ಎಂದರು.

ಸಭೆಯಲ್ಲಿ ಶಾಸಕರಾದ ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಜಿ.ಪಂ ಮಾಜಿ ಸದಸ್ಯ ಬಿ.ಎಲ್.ದೇವರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ತಾ.ಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net