

ಮಂಡ್ಯ: ಜಿಲ್ಲೆಯಲ್ಲಿ ಸತತವಾಗಿ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ ಕೇವಲ ಒಂದೇ ವರ್ಷದ ಅವಧಿಯಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ. ಇದಕ್ಕೆ ಸಾಕ್ಷ್ಯವೆಂಬಂತೆ ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಲೀಡ್ ಕಳೆದುಕೊಂಡಿದೆ. ಸಂಸತ್ ಕ್ಷೇತ್ರದ ಏಳು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು, ಮೂವರು ಎಂಎಲ್‌ಸಿಗಳಿದ್ದರೂ ದೊಡ್ಡಮಟ್ಟದ ಹಿನ್ನಡೆಯಾಗಿರುವುದು 2019ರ ಲೋಕಸಭಾ ಚುನಾವಣೆಯನ್ನು ನೆನಪಿಸಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್‌ನ ಎಂಟು ಜನ ಶಾಸಕರು, ಇವರಲ್ಲಿ ಮೂವರು ಸಚಿವರು, ಮೂವರು ಎಂಎಲ್‌ಸಿಗಳಿದ್ದರು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. ಇಷ್ಟಾದರೂ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಕಾಂಗ್ರೆಸ್ ಕೂಡ ಅದೇ ಪರಿಸ್ಥಿತಿಯನ್ನು ಎದುರಿಸಿದೆ. ಅದರಲ್ಲಿಯೂ ಮದ್ದೂರು, ನಾಗಮಂಗಲ, ಶ್ರೀರಂಗಪಟ್ಟಣ, ಮಂಡ್ಯ ಕ್ಷೇತ್ರದಲ್ಲಿ ದಳದ ಅಬ್ಬರ ಜೋರಾಗಿದ್ದು, 2018ರ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಸ್ಮರಿಸಿಕೊಳ್ಳುವಂತೆ ಮಾಡಿದೆ.
ಕಾಂಗ್ರೆಸ್‌ಗೆ ಅತೀವ ವಿಶ್ವಾಸ: 2019ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಜೆಡಿಎಸ್‌ಗೆ ಪೆಟ್ಟು ನೀಡಿದ ಕಾಂಗ್ರೆಸ್, ಬಳಿಕ ಕೆ.ಆರ್.ಪೇಟೆ ಉಪಚುನಾವಣೆ, ಎರಡು ಎಂಎಲ್‌ಸಿ ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿಯೂ ಠಕ್ಕರ್ ಕೊಟ್ಟಿತ್ತು. ಪರಿಣಾಮ ಜಿಲ್ಲೆಯಲ್ಲಿ ದಳ ಅಸ್ಥಿತ್ವ ಉಳಿಸಿಕೊಳ್ಳಲು ಪರದಾಡುವಂತಾಯಿತು.
ಈ ನಡುವೆ ಲೋಕಸಭಾ ಚುನಾವಣೆಯಲ್ಲಿಯೂ ಸೋಲಿಸಿ ಜೆಡಿಎಸ್ ಅಸ್ಥಿತ್ವಕ್ಕೆ ಕೊಡಲಿ ಪೆಟ್ಟು ನೀಡಲು ಕಾಂಗ್ರೆಸ್ ಸಜ್ಜಾಗಿತ್ತು. ಅದರಂತೆ ಚುನಾವಣೆ ಘೋಷಣೆಗೂ ಮುನ್ನವೇ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಅವರನ್ನು ಪರೋಕ್ಷವಾಗಿ ಬಿಂಬಿಸಲಾಯಿತು. ಬಳಿಕ ಮೊದಲ ಪಟ್ಟಿಯಲ್ಲಿಯೇ ಘೋಷಣೆಯಾಯಿತು. ಮಾತ್ರವಲ್ಲದೆ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸಮಾವೇಶ ಹಾಗೂ ಅಭ್ಯರ್ಥಿ ಪರಿಚಯ ಮಾಡಿಕೊಡುವ ಹೊಣೆಯವನ್ನು ಶಾಸಕರು ಹೊಂದಿದ್ದರು. ಅದರಂತೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಘೋಷಣೆ ಮುನ್ನವೇ ಕಾಂಗ್ರೆಸ್ ಎರಡನೇ ಹಂತ ದಾಟಿತ್ತು. ಒಂದು ಹಂತದಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ ಎನ್ನುವಂತಿತ್ತು. ಇದರೊಟ್ಟಿಗೆ ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳು, ಅದರಲ್ಲಿಯೂ ಮಹಿಳಾ ಮತದಾರರು ತಮಗೆ ಬೆಂಬಲ ನೀಡಲಿದ್ದಾರೆನ್ನುವ ಅತೀವ ವಿಶ್ವಾಸ ಕಾಂಗ್ರೆಸ್‌ನಲ್ಲಿತ್ತು.
ಈ ಎಲ್ಲ ಪರಿಸ್ಥಿತಿ ಅವಲೋಕಿಸಿದಾಗ ಎಚ್.ಡಿ.ಕುಮಾರಸ್ವಾಮಿ ಅವರನ್ನೇ ಅಖಾಡಕ್ಕಿಳಿಸಲು ಮೈತ್ರಿ ಪಕ್ಷ ಯೋಜನೆ ರೂಪಿಸಿದವು. ಅದರಂತೆ ಎಚ್‌ಡಿಕೆ ಸ್ಪರ್ಧೆಯೂ ಖಚಿತವಾಗುತ್ತಿದ್ದಂತೆ ಅಖಾಡ ಕಾವೇರಿತು. ಈ ನಡುವೆ ಗಮನಾರ್ಹ ಅಂಶವೆಂದರೆ ಸ್ವತಃ ಅಭ್ಯರ್ಥಿಯಾದರೂ ಎಚ್‌ಡಿಕೆ ಕ್ಷೇತ್ರದ ಎಲ್ಲ ಕಡೆಯೂ ಪ್ರವಾಸ ಮಾಡಲಿಲ್ಲ. ಬದಲಿಗೆ ಸ್ಥಳೀಯ ನಾಯಕರೇ ಉಸ್ತುವಾರಿ ವಹಿಸಿಕೊಂಡರು. ಎಚ್‌ಡಿಕೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸಮಾವೇಶ ಆಯೋಜಿಸಿ ಜನರನ್ನು ಮತಕೇಳಿದರು. ಇವರಿಗೆ ಬಿಜೆಪಿ ನಾಯಕರು ಸಾಥ್ ನೀಡಿದರು. ಕ್ಷೇತ್ರದ ಮತದಾರರು ಎಚ್‌ಡಿಕೆಗೆ ಆರ್ಶೀವಾದ ಮಾಡಿದ್ದಾರೆ.
ಮಗನ ಸೋಲಿಗೆ ಸೇಡು ತೀರಿಸಿಕೊಂಡ ಅಪ್ಪ
2019ರ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ಕುಮಾರಸ್ವಾಮಿ ಸೋಲಿಗೆ ಕಾಂಗ್ರೆಸ್ ಪ್ರಮುಖ ಕಾರಣವಾಗಿತ್ತು. ಮೈತ್ರಿ ಒಪ್ಪಂದ ಮೀರಿ ಸುಮಲತಾಗೆ ಬೆಂಬಲ ನೀಡಿದರು. ಇದನ್ನು ಚುನಾವಣಾ ಪ್ರಚಾರದ ಬಹಿರಂಗ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿಕೊಂಡಿದ್ದರು. ಇದಲ್ಲದೆ ಎಚ್‌ಡಿಕೆ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಹೊರತಾಗಿರಲಿಲ್ಲ.
ಇನ್ನು ಪ್ರಚಾರದ ವೇಳೆ ಕಾಂಗ್ರೆಸ್ ಶಾಸಕರು ನಾಲಗೆ ಹರಿಬಿಟ್ಟರು. ಪ್ರಮುಖವಾಗಿ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ಎಚ್‌ಡಿಕೆ ಹೃದಯ ಸಂಬಂಧಿ ಚಿಕಿತ್ಸೆ ಬಗ್ಗೆ ವ್ಯಂಗ್ಯವಾಡಿದರು. ಮದ್ದೂರು ಶಾಸಕ ಉದಯ್ ಕೂಡ ಎಚ್‌ಡಿಕೆ ಕುರಿತು ಕಟು ಟೀಕೆ ಮಾಡಿದ್ದರು. ಅಂತೆಯೇ ಮಂಡ್ಯ ತಾಲೂಕು ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದ ನಿರ್ದಿಷ್ಟ ಸಮುದಾಯಕ್ಕೆ ಬೇಸರಕ್ಕೆ ಕಾರಣವಾಯಿತು. ಇದೆಲ್ಲವೂ ಚುನಾವಣೆ ವೇಳೆ ಪರಿಣಾಮ ಬೀರುತ್ತಾ ಸಾಗಿತ್ತು. ಇನ್ನೊಂದೆಡೆ ಕಾಂಗ್ರೆಸ್ ಕೆಲ ಸಮುದಾಯದ ಓಲೈಕೆಗೆ ಸೀಮಿತವಾಯಿತು. ಇದು ಒಕ್ಕಲಿಗ ಸಮುದಾಯದ ಮತಗಳನ್ನು ಗಟ್ಟಿಗೊಳಿಸಿದವು. ಇದರೊಟ್ಟಿಗೆ ಲಿಂಗಾಯತ, ಬ್ರಾಹ್ಮಣ ಸೇರಿದಂತೆ ಕೆಲ ಸಮುದಾಯ ಬೆಂಬಲ ಮೈತ್ರಿ ಪರ ಒಲವು ತೋರಿಸಿದವು. ಜತೆಗೆ ಬಿಜೆಪಿಯ ಸಾಂಪ್ರಾದಾಯಿಕ ಮತಗಳು ಎಚ್‌ಡಿಕೆಗೆ ಬೆಂಬಲವಾಗಿ ನಿಂತವು.
ಇದಲ್ಲದೆ ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಸರ್ಕಾರ ನಿರ್ಲಕ್ಷೃ ತೋರಿಸಿತು. ಜಿಲ್ಲೆಯಲ್ಲಿ ಕೃತಕ ಬರಗಾಲ ಸೃಷ್ಟಿಸಿತು ಎನ್ನುವ ವಿರೋಧಿ ಅಲೆ ಗ್ರಾಮೀಣ ಭಾಗದಲ್ಲಿ ಗಟ್ಟಿಯಾಯಿತು. ಅಂತೆಯೇ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯುವ ಖರ್ಚನ್ನು ರೈತರೇ ಭರಿಸಬೇಕೆಂಬ ರಾಜ್ಯಸರ್ಕಾರದ ಆದೇಶ ಅನ್ನದಾತರ ಆಕ್ರೋಶವನ್ನು ಹೆಚ್ಚಿಸುತ್ತಾ ಹೋಯಿತು.
ಈ ಎಲ್ಲದರ ಪರಿಣಾಮ ಎಚ್‌ಡಿಕೆ ಅವರನ್ನು ಅಭೂತಪೂರ್ವ ಗೆಲುವು ಕಾಣುವಂತೆ ಮಾಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು ಪಡೆದಿದ್ದ ಲೀಡ್ ಅನ್ನು ಮೆಟ್ಟಿದ ದಳ 2018ರ ಚುನಾವಣೆಯಲ್ಲಿ ಗಳಿಸಿದ ಲೀಡ್‌ಗಳನ್ನೇ ಪಡೆದುಕೊಂಡಿದೆ. ಇನ್ನು ಗಮನಾರ್ಹ ಅಂಶವೆಂದರೆ 2019ರ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಜೆಡಿಎಸ್ ಮರುಕಳಿಸಲಿಲ್ಲ. ಅಂದರೆ ಅಂಬರೀಷ್ ಕುಟುಂಬದ ಬಗ್ಗೆ ಮಾತನಾಡಿ ಸೋಲು ಕಾಣುವಂತಾಗಿತ್ತು. ಈ ಬಾರಿ ಅಂತಹ ತಪ್ಪನ್ನು ಮಾಡಲಿಲ್ಲ. ಚುನಾವಣೆಗೆ ಮುನ್ನ ನಡೆದ ಜೆಡಿಎಸ್ ಸಭೆಯಲ್ಲಿ ಅಂಬರೀಷ್ ಕುಟುಂಬದ ವಿಚಾರದ ಮಾತನಾಡಲು ಹೋದಾಗ ನಿಲ್ಲಿಸುವಂತೆ ಕಾರ್ಯಕರ್ತರೇ ನಾಯಕರಿಗೆ ಸಲಹೆ ನೀಡಿದ್ದರು.