

ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನವು ಏ.26ರಂದು ನಡೆಯಲಿದೆ. ಅರ್ಹ ಮತದಾರರು ಅಂದು ತಮ್ಮ ಎಲ್ಲ ಕೆಲಸಗಳನ್ನು ಬದಿಗಿಟ್ಟು ತಪ್ಪದೇ ಮತದಾನ ಮಾಡಿ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ಮನವಿ ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಸ್ವೀಫ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕುರಿತು ಅಂಗವಿಕಲರ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ಮತದಾರರು ಯಾವುದೇ ಆಮಿಷ ಅಥವಾ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತ ಹಾಗೂ ನಿರ್ಭೀತಿಯಿಂದ ನೇರವಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು. ಇದಕ್ಕೆ ಅನುಕೂಲವಾಗುವಂತೆ ಮತದಾರರಿಗೆ ತನ್ನ ಹೆಸರಿರುವ ಮತಗಟ್ಟೆ ಮತ್ತು ಕ್ರಮ ಸಂಖ್ಯೆ ಹಾಗೂ ಮತದಾನದ ದಿನಾಂಕ, ಸಮಯವನ್ನು ನಮೂದಿಸಿ ವೋಟರ್ ಸ್ಲಿಪ್ ಅನ್ನು ವಿತರಿಸಲಾಗುತ್ತಿದೆ ಎಂದರು.
ಸಕ್ಷಮ್ ಆ್ಯಪ್ ಮೂಲಕ ಅಂಗವಿಕಲ ಮತದಾರರಿಗೆ ಅನುಕೂಲವಾಗುವಂತೆ ಮತದಾರರ ಹೆಸರು, ವಿಳಾಸ ಮತ್ತು ಮೊಬೈಲ್ ವಿವರಗಳನ್ನು ಪ್ರಕಟಿಸಿ ಚುನಾವಣಾ ಮಾಹಿತಿಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಮಾತ್ರವಲ್ಲದೆ ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಸುಗಮವಾಗಿ ಮತದಾನ ಮಾಡಲು ಪ್ರತಿ ಮತಗಟ್ಟೆಗೆ ಇಳಿಜಾರು, ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗುವುದು. ದೃಷ್ಟಿ ದೋಷವುಳ್ಳವರಿಗೆ ಬ್ರೈಲ್ ಲಿಪಿಯುಳ್ಳ ವಿದ್ಯುನ್ಮಾನ ಮತಯಂತ್ರ ಹಾಗೂ ಡಮ್ಮಿ ಬ್ರೈಲ್ ಬ್ಯಾಲೆಟ್ ಪೇಪರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಇನ್ನು ಶ್ರವಣದೋಷವುಳ್ಳವರಿಗೆ ಮತದಾನ ಮಾಡಲು ಅವಶ್ಯಕ ವಿಷಯವನ್ನು ಮತದಾರರು ತಜ್ಞರಿಂದ ಸಂಜ್ಞಾ ಭಾಷೆ ಮೂಲಕ ಮಾಹಿತಿ ಕಲ್ಪಿಸಲಾಗುವುದು. ಮಂದ ದೃಷ್ಟಿಯುಳ್ಳವರಿಗೆ ಮತಗಟ್ಟೆ ಕೇಂದ್ರಗಳಲ್ಲಿ ಬೂತಗನ್ನಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಗವಿಕಲ, ಆಸಕ್ತ ಮತ್ತು ಹಿರಿಯ ನಾಗರಿಕರಿಗೆ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಮತ ಚಲಾಯಿಸಲು ಅವಕಾಶ ನೀಡಲಾಗುವುದು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಯೋಜನಾ ನಿರ್ದೇಶಕ ಸಂಜೀವಪ್ಪ ಇತರರಿದ್ದರು.