

ನರಗುಂದ: ಪಟ್ಟಣದ ಜೆಎಂಎಫ್ ನ್ಯಾಯಾಲಯದಲ್ಲಿ ಸೆ.9 ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು, ಪಕ್ಷಗಾರರು ವಿವಿಧ ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜೀ ಸಂಧಾನ ಮಾಡಿಕೊಳ್ಳುವ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ದಿವಾಣಿ ನಾಯಾಧೀಶೆ ಗಾಯತ್ರಿ ಎಚ್.ಡಿ. ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ‘ನರಗುಂದ ತಾಲೂಕಿನಲ್ಲಿ ಒಟ್ಟು 1155 ವಿವಿಧ ಚಾಲ್ತಿ ಪ್ರಕರಣಗಳಿವೆ. ಇದರಲ್ಲಿ ಸಿವಿಲ್ ಧಾವೆಗಳು, ಬ್ಯಾಂಕ್ ವಸೂಲಾತಿ, ಕಾರ್ಮಿಕ, ಚೆಕ್‌ಬೌನ್ಸ್, ದೌರ್ಜನ್ಯ, ಜೀವನಾಂಶ, ಕೌಟುಂಬಿಕ ಪ್ರಕರಣಗಳು ಸೇರಿದಂತೆ ರಾಜೀಯಾಗಲು ಅರ್ಹವಿರುವ ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳನ್ನು ರಾಜೀಗಾಗಿ ಗುರುತಿಸಲಾಗಿದೆ.
ಪ್ರತಿದಿನ ರಾಜೀಗಾಗಿ ಆಯ್ಕೆ ಮಾಡಿದ ಪ್ರಕರಣಗಳನ್ನು ಸಂಬಂಧಪಟ್ಟ ವಕೀಲರು ತಮ್ಮ ಪಕ್ಷಗಾರರೊಂದಿಗೆ ಮುಂಚಿತವಾಗಿಯೇ ರಾಜೀ ಸಂಧಾನದಿಂದ ಆಗುವ ವಿವಿಧ ಪ್ರಯೋಜನಗಳ ಕುರಿತು ಮನವರಿಕೆ ಮಾಡಿಕೊಡಬೇಕು. ಪ್ರಕರಣಗಳು ಒಮ್ಮೆ ರಾಜೀ ಸಂಧಾನವಾದರೆ ಉಭಯ ಪಕ್ಷಗಾರರಿಗೆ ಮೇಲ್ಮನವಿ ಸಲ್ಲಿಸಲು ಯಾವುದೇ ಅವಕಾಶ ಇರುವುದಿಲ್ಲ. ಪ್ರಕರಣ ಇಲ್ಲಿಗೆ ಮುಕ್ತಾಯವಾಗುವುದರಿಂದ ಪಕ್ಷಗಾರರಿಗೆ ಆಗುತ್ತಿರುವ ಆರ್ಥಿಕ ಹೊರೆ, ಸಮಯ ಪೋಲಾಗುವುದನ್ನು ತಪ್ಪಿಸಬಹುದು. ಜತೆಗೆ ಮೊದಲಿನ ಬಾಂಧವ್ಯವನ್ನು ಉಳಿಸಿಕೊಳ್ಳಬಹುದು’ ಎಂದು ತಿಳಿಸಿದ್ದಾರೆ.