12ರಂದು ದ. ಕನ್ನಡ ಜಿಲ್ಲೆಯಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸುವ ಲೋಕ ಅದಾಲತ್

loka
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸುವ ಲೋಕ ಅದಾಲತ್ ಜು.12ರಂದು ಬೆಳಗ್ಗೆ 10.30ರಿಂದ ಸಂಜೆ 4.30ರ ತನಕ ನಡೆಯಲಿದೆ.

ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆ ಮತ್ತು ಸುಳ್ಯ ನ್ಯಾಯಾಲಯಗಳ ಆವರಣಗಳಲ್ಲಿ ಒಟ್ಟು 37 ನ್ಯಾಯಾಲಯ ಪೀಠಗಳಲ್ಲಿ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಲೋಕ ಆದಾಲತ್ ಕಾರ್ಯಕ್ರಮದಲ್ಲಿ ನ್ಯಾಯಾಧಿಶರು, ಮಂಗಳೂರು ವಕೀಲರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು, ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿ, ಅಭಿಯೋಜಕರು, ಇನ್ಸೂರೆನ್ಸ್ ಕಂಪೆನಿಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಯಾವೆಲ್ಲ ಪ್ರಕರಣಗಳ ವಿಲೇವಾರಿ

ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ಚೆಕ್‌ಬೌನ್ಸ್ ಪ್ರಕರಣಗಳು ಸೇರಿದಂತೆ ಪರಸ್ಪರ ರಾಜಿಯಾಗಬಹುದಾದಂತ ಸಿವಿಲ್, ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು. ಬ್ಯಾಂಕಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು, ವಿದ್ಯುಚ್ಛಕ್ತಿ ಮಂಡಳಿ, ಜಲ ಮಂಡಳಿ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ಬರಬಹುದಾದ ಪೂರ್ವ ವ್ಯಾಜ್ಯ ಪ್ರಕರಣಗಳನ್ನು ಉಭಯ ಕಕ್ಷಿದಾರರನ್ನು ಕರೆಸಿಕೊಂಡು ರಾಜಿ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸಿ ನ್ಯಾಯ ಒದಗಿಸಲಾಗುವುದು ಎಂದರು.

‘ಸಾಥಿ’ ಅಭಿಯಾನದಡಿ ಪರಿತ್ಯಕ್ತ, ಪೋಷಕರಿಲ್ಲದ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲಾಗುತ್ತಿದ್ದು, ಅದಕ್ಕೆ ಅಗತ್ಯವಾದ ಜನನ ಪ್ರಮಾಣ ಪತ್ರವನ್ನು ಪಾಲಿಕೆಯವರು ಮಾಡಿಕೊಡಬೇಕೆಂದರು. ವಿಮಾ ಕಂಪನಿಗಳ ಸಹಿತ ವಿವಿಧ ಇಲಾಖೆಗಳು ಪ್ರಸಕ್ತ ನ್ಯಾಯಾಲಯದಲ್ಲಿ ಹಾಲಿ ಹಾಗು ಬಾಕಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ಈ ಬಾರಿಯ ಲೋಕ ಅದಾಲತ್‌ನಲ್ಲಿ ಒಟ್ಟು 57,305ರಷ್ಟು ಪ್ರಕರಣಗಳ ಪೈಕಿ ರಾಜಿ ಸಂಧಾನ ಮಾಡಬಹುದಾದ 9,302 ಪ್ರಕರಣಗಳನ್ನು ಕೈಗೆತ್ತಿಗೊಂಡು ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುವುದು. ಸುಮಾರು 3510 ಪ್ರಕರಣಗಳು ವಿಲೇವಾರಿ ಆಗಿವೆ. ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡರೆ ಪ್ರಕರಣ ಇತ್ಯರ್ಥಗೊಳಿಸಲು ನ್ಯಾಯಾಲಯಕ್ಕೆ ಕಟ್ಟಿದ ಶುಲ್ಕ ವಾಪಾಸು ದೊರೆಯಲಿದೆ. ಲೋಕ ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣಗಳು ವಿಲೇವಾರಿಯಾದರೆ, ನ್ಯಾಯಾಲಯದಲ್ಲಿ ಪ್ರಸಕ್ತ ವಿಚಾರಣೆಯಲ್ಲಿರುವ ಪ್ರಕರಣಗಳ ವಿಲೇವಾರಿಯೂ ಶೀಘ್ರ ಆಗಲಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಜೈಬುನ್ನಿಸ ಮಾತನಾಡಿ, ಮಹಿಳೆಯರಿಗೆ, ಮಕ್ಕಳಿಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ದೊರೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net