

ಮಂಡ್ಯ: ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ನ.12ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ. ಅಂತೆಯೇ ಇದರ ಪೂರ್ವಭಾವಿಯಾಗಿ ನ.12ರವರೆಗೆ ಪ್ರತಿದಿನ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಪೂರ್ವಭಾವಿ ಬೈಠಕ್/ಪೀಠ ನಡೆಯುತ್ತಿವೆ ಎಂದು ಪ್ರಭಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಎ.ನಾಗಜ್ಯೋತಿ ಹೇಳಿದರು.
ರಾಜಿಯಾಗಬಹುದಾದ ಪ್ರಕರಣಗಳನ್ನು ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಬಹುದು. ಜಿಲ್ಲೆಯಲ್ಲಿ 76,251 ಪ್ರಕರಣಗಳಿದ್ದು, ಇದರಲ್ಲಿ 6,670 ಪ್ರಕರಣ ರಾಜಿ ಮಾಡಬಹುದೆಂದು ಗುರುತಿಸಲಾಗಿದೆ. ಇನ್ನು ಬೈಠಕ್‌ನಲ್ಲಿ ಟೆಲಿಫೋನ್ ಬಿಲ್, ವಿದ್ಯುತ್ ಶುಲ್ಕ, ಸಣ್ಣ ಪುಟ್ಟ ಸಾಲ ವಸೂಲಾತಿಗಾಗಿ ಬ್ಯಾಂಕ್‌ಗಳು ಸಲ್ಲಿಸಿರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಬಹುದು. ಈಗಾಗಲೇ 233 ಪ್ರಕರಣ ಇತ್ಯರ್ಥಗೊಂಡಿವೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ನ್ಯಾಯಾಲಯದಲ್ಲಿ ಬಾಕಿ ಇರುವ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಎರಡೂ ಕಡೆಯವರೂ ಒಪ್ಪಿದರೆ ಮಾಹಿತಿ ಕೊಡಬೇಕು. ರಾಜಿ ಆಗಬಹುದಾದಂತಹ ಕ್ರಿಮಿನಲ್, ಚೆಕ್‌ಬೌನ್ಸ್ ಸೇರಿದಂತೆ ಕೆಲ ಪ್ರಕರಣವನ್ನು ವಿಚಾರಣೆ ನಡೆಸಿ ಇತ್ಯರ್ಥಗೊಳಿಸುವ ಪ್ರಯತ್ನ ಮಾಡಲಾಗುವುದು. ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ನ್ಯಾಯಾಲಯ ಶುಲ್ಕ ಕೊಡಬೇಕಿಲ್ಲ. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜೀ ಮಾಡಿಕೊಳ್ಳಬಹುದು. ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣವಾಗಿ ಮರು ಪಾವತಿಸಲಾಗುವುದು ಎಂದರು.
ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕೆ ಇದೊಂದು ವಿಶೇಷ ಅವಕಾಶ. ಸಾರ್ವಜನಿಕರು ಆನ್‌ಲೈನ್/ವಿಡಿಯೋ ಕಾನ್ಫರೆನ್ಸ್/ಈಮೇಲ್/ಎಸ್‌ಎಂಎಸ್/ವಾಟ್ಸ್‌ಆ್ಯಪ್/ಎಲೆಕ್ಟ್ರಾನಿಕ್ ಮೋಡ್ ಮುಖಾಂತರ ಲೋಕ ಅದಾಲತ್‌ನಲ್ಲಿ ಭಾಗವಹಿಸಬಹುದು. ಮಾಹಿತಿಗಾಗಿ ಜಿಲ್ಲಾ/ತಾಲೂಕು ಕಾನೂನು ಸೇವೆಗಳ ಸಮಿತಿಗಳಿಗೆ, 8050268317 ಸಂಖ್ಯೆಗೆ ಎಸ್‌ಎಂಎಸ್ ಅಥವಾ ವಾಟ್ಸ್‌ಆ್ಯಪ್ ಸಂದೇಶ, ಸಹಾಯವಾಣಿ ಸಂಖ್ಯೆ 08232-229345/180042590900 ಅಥವಾ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ.ನಳಿನಿಕುಮಾರಿ ಮಾತನಾಡಿ, ಕಳೆದ ಬಾರಿಯ ಅದಾಲತ್‌ನಲ್ಲಿ 9244 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅಂತೆಯೇ ಈ ಬಾರಿಯ ಅದಾಲತ್‌ಅನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಇದರಿಂದ ಸಂಬಂಧಗಳ ನಡುವೆ ಬಾಂಧವ್ಯ ಹೆಚ್ಚುವುದರ ಜತೆಗೆ ಶಾಂತಿ, ಸೌಹಾರ್ದತೆಯಿಂದ ಜೀವನ ಮಾಡಬಹುದು ಎಂದು ಸಲಹೆ ನೀಡಿದರು.
ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದಂತೆ ರೈತರು ಲೋಕ ಅದಾಲತ್‌ನಲ್ಲಿ ಬಳಸಿಕೊಂಡು ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬಹುದು. ಸಾಲಕ್ಕೆಂದು ಬ್ಯಾಂಕ್ ಖಾತೆಯಲ್ಲಿ ವ್ಯವಹಾರವನ್ನು ತಡೆಹಿಡಿಯಲಾಗಿರುತ್ತದೆ. ಹೀಗಾದಾಗ ಖಾತೆಗೆ ಬರುವ ಸಹಾಯಧನ ಸೇರಿದಂತೆ ಯಾವುದೇ ಹಣ ರೈತರಿಗೆ ಸಿಗುವುದಿಲ್ಲ. ಕೆಲವರು ಸಾಲ ಮನ್ನಾ ಆಗಿದೆ ಎಂದು ಸುಮ್ಮನೆಯೂ ಆಗಿರುವ ಉದಾಹರಣೆಯೂ ಇದೆ. ಆದರೆ ಬಡ್ಡಿ ಬೆಳೆಯುತ್ತಿರುತ್ತದೆ. ಆದ್ದರಿಂದ ರೈತರು ಮತ್ತು ಬ್ಯಾಂಕ್ ಅಧಿಕಾರಿಗಳು ಅದಾಲತ್‌ನಲ್ಲಿ ಪಾಲ್ಗೊಂಡು ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಪ್ರಮುಖವಾಗಿ ಒಮ್ಮೆಲೆ ಹಣ ಕಟ್ಟಲು ಸಾಧ್ಯವಾಗದಿದ್ದರೆ ಕಂತಿನ ರೂಪದಲ್ಲಿ ಪಾವತಿಸಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.