

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ(ಗ್ರಾ): ಸೆ. 9ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಶಿಗ್ಗಾಂವಿ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶ ಫೈರೋಜಾ ಹ. ಉಕ್ಕಲಿ ಹೇಳಿದರು.
ಶಿಗ್ಗಾಂವಿ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಸಭಾಭನದಲ್ಲಿ ಬುಧವಾರ ಆಯೋಜನೆಗೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ವ್ಯಾಜ್ಯ ಪೂರ್ವ ಪ್ರಕರಣಗಳು, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು, ಬ್ಯಾಂಕ್ ವಸೂಲಾತಿ, ರಾಜಿಯಾಗಬಲ್ಲ ಅಪರಾಧ ಪ್ರಕರಣಗಳು, ವೈವಾಹಿಕ ಪ್ರಕರಣಗಳು, ಚೆಕ್ ಅಮಾನ್ಯದ ಪ್ರಕರಣಗಳು, ವೇತನ, ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳನ್ನು ರಾಜಿ ಹಾಗೂ ಕಡಿಮೆ ಖರ್ಚಿನಲ್ಲಿ ಪರಿಹರಿಸಲು ಅವಕಾಶವಿದೆ.
ಸಾರ್ವಜನಿಕರು ಲೋಕ ಅದಾಲತ್ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಇಚ್ಛಿಸಿದಲ್ಲಿ ಮುಂಚಿತವಾಗಿ ಸಂಬಂಧಿತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕ ಸೇವಾ ಸಮಿತಿಗಳನ್ನು ಸಂರ್ಪಸಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಪೂರ್ವಬಾವಿ ಸಭೆಯಲ್ಲಿ ಕಿರಿಯ ದಿವಾಣಿ ನ್ಯಾಯಾದೀಶರಾದ ನಸ್ರತ್ ಮುಕ್ತಾರ ಅಹ್ಮದ್ ಖಾನ್ ಹಾಗೂ ತಾಲೂಕಿನ ವಿವಿಧ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ವಕೀಲರು ಉಪಸ್ಥಿತರಿದ್ದರು.