ಪಾಂಡವಪುರ : ಪಟ್ಟಣದ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ವತಿಯಿಂದ ಸೆ.13ರಂದು ಆಯೋಜಿಸಿರುವ ಲೋಕ ಅದಾಲತ್‌ನಲ್ಲಿ ಕಕ್ಷಿದಾರರು ರಾಜಿ-ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯಾರ್ಥಪಡಿಸಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ತಿಳಿಸಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರ ಇವರ ನಿರ್ದೇಶನದಂತೆ ಪ್ರತಿವರ್ಷ ನ್ಯಾಯಾಲದಲ್ಲಿ ಬಾಕಿ ಇರುವ ಪ್ರಕರಣ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಲು ಲೋಕ ಅದಾಲತ್ ಆಯೋಜಿಸಿಸಲಾಗಿದೆ. ಕಕ್ಷಿದಾರರು, ಸಾರ್ವಜನಿಕರು, ವಕೀಲರು ಸೇರಿದಂತೆ ಎಲ್ಲರ ಸಹಕಾರದಿಂದ ಪ್ರತಿಬಾರಿ ಆಯೋಜನೆಗೊಳ್ಳುವ ಜನತಾ ನ್ಯಾಯಾಲಯದಲ್ಲಿ ನಿರೀಕ್ಷೆಗೆ ತಕ್ಕಂತೆ ಸಾಕಷ್ಟು ಪ್ರಕರಣಗಳು ಸಂಧಾನದ ಮೂಲಕ ಇತ್ಯರ್ಥಗೊಳ್ಳುತ್ತಿದೆ. ಸೆ.13 ರಂದು ನಡೆಯುತ್ತಿರುವ ಲೋಕ ಅದಾಲತ್‌ನ ಪ್ರಯೋಜನವನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅದಾಲತ್‌ನಲ್ಲಿ ರಾಜಿ ಸಂಧಾನಕ್ಕೆ ಸೂಕ್ತವಾದಂತಹ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಪ್ರಸ್ತುತ ನ್ಯಾಯಾಲಯದಲ್ಲಿ 150 ಎಂವಿಸಿ ಪ್ರಕರಣಗಳು, 10 ಎಂಎಂಆರ್‌ಡಿ ಪ್ರಕರಣ, 5 ಎಲ್‌ವಿಸಿ ಪ್ರಕರಣ, 158 ವಿಭಾಗ ದಾವೆ, 205 ಇತರ ಸಿವಿಲ್ ಪ್ರಕರಣ, 230 ನಿರ್ಧಿಷ್ಟ ಪರಿಹಾರಕ್ಕಾಗಿ ದಾವೆ ಪ್ರಕರಣ, 21 ಕ್ರಿಮಿನಲ್ ಪ್ರಕರಣ, 320 ಎನ್‌ಐ ಆಕ್ಟ್ ಪ್ರಕರಣಗಳು ಸೇರಿದಂತೆ ಒಟ್ಟು 1099 ಪ್ರಕರಣಗಳನ್ನು ಮುಂದಿನ ಲೋಕ ಅದಾಲತ್‌ಗೆ ತೆಗೆದುಕೊಳ್ಳಲಾಗಿದೆ. ಜತೆಗೆ ಪಂಚಾಯಿತಿ, ಪುರಸಭೆ ನೀರಿನ ಬಿಲ್ ಪಾವತಿ, ಟೆಲಿಫೋನ್ ಬಿಲ್, ವಿದ್ಯುತ್‌ಬಿಲ್ ಹಾಗೂ ಸಣ್ಣಪುಟ್ಟ ಬ್ಯಾಂಕ್ ಸಾಲ ವಸೂಲಾತಿ, ಚೆಕ್‌ಬೌನ್ಸ್ ಪ್ರಕರಣಗಳನ್ನು ಸಹ ರಾಜಿಸಂಧಾನದ ಮೂಲಕ ಇತ್ಯರ್ಥಕ್ಕೆ ಒಳಪಡಲಿದೆ ಎಂದರು.
ಲೋಕ ಅದಾಲತ್ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಗ್ರಾಪಂ ಕಚೇರಿ, ಪುರಸಭೆ ಕಚೇರಿ ಆವರಣದಲ್ಲಿ ಬ್ಯಾನರ್ ಮತ್ತು ಕರಪತ್ರಗಳನ್ನು ವಿತರಿಸುವ ಮೂಲಕ ಜನತಾ ನ್ಯಾಯಾಲಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕಕ್ಷಿದಾರರು ಕಾರ್ಯಕ್ರಮದ ಮಹತ್ವ ಅರಿತು ಲೋಕಅದಾಲತ್‌ನಲ್ಲಿ ಭಾಗವಹಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಬಾಬು, ತಾಲೂಕು ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಮೋಹನ್ ಇದ್ದರು.