

ಮಂಡ್ಯ: ಲೋಕ ಅದಾಲತ್ ಬಗ್ಗೆ ಎಲ್ಲರಿಗೂ ಅರಿವು ಇರಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ.ನಳಿನಕುಮಾರಿ ಹೇಳಿದರು.
ತಾಲೂಕಿನ ಚೀರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ಪಿಇಎಸ್ ಕಾನೂನು ಕಾಲೇಜು ಮತ್ತು ಕಾನೂನು ಸಲಹಾ ಕೇಂದ್ರ, ಜಿಲ್ಲಾ ಪಂಚಾಯಿತಿ, ಮಹಿಳಾ ಸರ್ಕಾರಿ ಕಾಲೇಜು ವತಿಯಿಂದ ಶುಕ್ರವಾರ ಆಯೋಜಿಸಿದ್ದ ಗ್ರಾಮ ಲೋಕ ಅದಾಲತ್‌ನಲ್ಲಿ ಮಾತನಾಡಿದರು.
ನಮ್ಮ ದೇಶದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ಕಾನೂನು ಸಲಹಾ ಸೇವಾ ಕೇಂದ್ರ ಕೆಲಸ ಮಾಡುತ್ತದೆ. ಕಾನೂನು ಚೌಕಟ್ಟಿನಡಿ ಸಮಸ್ಯೆ ಬಗೆಹರಿಸಿಕೊಳ್ಳುವುದನ್ನೇ ಲೋಕ ಅದಾಲತ್ ಎನ್ನುತ್ತಾರೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಣ್ಣಪುಟ್ಟ ಘಟನೆಗಳು ನಡೆದಿರುತ್ತದೆ. ಅದನ್ನು ರಾಜೀ ಮಾಡಿಕೊಂಡು ಶಾಂತಿ ಕಾಪಾಡಿಕೊಳ್ಳುವುದಕ್ಕೆ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಂಧು ಬಳಗದವರೂ ಎಲ್ಲರೂ ಇದ್ದರೂ ಸಹ ಅಕ್ಕಪಕ್ಕದ ಮನೆಯವರ ಜೊತೆಯೂ ಸಹ ವಿಶ್ವಾಸ ಹಾಗೂ ಸೌಹಾರ್ಧತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಕರಣಗಳನ್ನು ಸುಖಾಂತ್ಯ ಮಾಡಿಕೊಳ್ಳಲು ಅನುಕೂಲಕರವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ವಾಣಿ ಎ.ಶೆಟ್ಟಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಕಾನೂನು ಸಲಹೆ ಮತ್ತು ಸೂಚನೆಗಳ ಅರಿವು ಇರಬೇಕು. ಲೋಕ ಅದಾಲತ್ ಅನ್ನು ಬಳಸಿಕೊಳ್ಳುವ ಮೂಲಕ ಗ್ರಾಮದಲ್ಲಿ ಶಾಂತಿಯಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ.ಆರ್.ದಶರಥ್, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ವಿಜಯಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಎಂ.ಕೆಂಪಮ್ಮ, ಪ್ರಮೋದ್‌ಕುಮಾರ್, ಮುಖ್ಯ ಶಿಕ್ಷಕಿ ಗಿರಿಜಾ, ವಕೀಲ ಲಕ್ಷ್ಮಣ್ ಚೀರನಹಳ್ಳಿ, ಕಾನೂನು ಸಹಾಯಕ ಪ್ರಾಧ್ಯಾಪಕ ಕೆ.ಎಸ್.ವಿಜಯ್‌ಕುಮಾರ್ ಇತರರಿದ್ದರು.