

ನರಗುಂದ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದನ್ವಯ ನರಗುಂದದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜು.8 ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ಸಾರ್ವಜನಿಕರು, ಪಕ್ಷಗಾರರು ನ್ಯಾಯಾಲಯದಲ್ಲಿ ಯಾವುದೇ ವ್ಯಾಜ್ಯಗಳನ್ನು ಹೊಂದಿದ್ದರೆ ಪರಸ್ಪರ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಆದಿತ್ಯ ಆರ್. ಕಲಾಲ ತಿಳಿಸಿದ್ದಾರೆ.
ನರಗುಂದ ತಾಲೂಕಿನಲ್ಲಿ ಬ್ಯಾಂಕ್ ವಸೂಲಾತಿ, ಸಿವಿಲ್ ಧಾವೆಗಳು, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಕಾರ್ಮಿಕ, ಚೆಕ್ ಬೌನ್ಸ್, ಕ್ರಿಮಿನಲ್ ಪ್ರಕರಣಗಳು ಸೇರಿ ಒಟ್ಟು, 1110 ವಿವಿಧ ಚಾಲ್ತಿ ಪ್ರಕರಣಗಳನ್ನು ರಾಜೀ ಆಗಲು ಅರ್ಹವಿರುವ ಪ್ರಕರಣಗಳೆಂದು ಗುರುತಿಸಲಾಗಿದೆ.
ಈ ಬಗ್ಗೆ ಸಂಬಂಧಪಟ್ಟ ವಕೀಲರು ತಮ್ಮ ಪಕ್ಷಗಾರರೊಂದಿಗೆ ಚರ್ಚಿಸಿ, ರಾಜೀ ಸಂಧಾನದಿಂದಾಗುವ ಆರ್ಥಿಕ ಹೊರೆ ಹಾಗೂ ವಿವಿಧ ಪ್ರಯೋಜನಗಳ ಬಗ್ಗೆ ತಿಳಿಸಿಕೊಡಬೇಕು.
ಲೋಕ ಅದಾಲತ್‌ನಲ್ಲಿ ಪ್ರಕರಣಗಳು ಒಮ್ಮೆ ರಾಜೀ ಸಂಧಾನವಾದರೆ ಉಭಯ ಪಕ್ಷಗಾರರಿಗೆ ಮೇಲ್ಮನವಿ ಸಲ್ಲಿಸಲು ಯಾವುದೇ ಅವಕಾಶ ಇರುವುದಿಲ್ಲ.
ಇದರಿಂದ ಉಭಯ ಪಕ್ಷಗಾರರ ಬಾಂಧವ್ಯ ವೃದ್ಧಿಯಾಗುವುದರ ಜತೆಗೆ ಬಹು ದಿನಗಳ ಸಮಸ್ಯೆಯನ್ನು ಇತ್ಯರ್ಥಪಡಿಸಿದಂತಾಗುತ್ತದೆ. ಹೀಗಾಗಿ ಯಾವುದೇ ವ್ಯಾಜ್ಯ ಹೊಂದಿರುವ ಪಕ್ಷಗಾರರು ಲೋಕ ಅದಾಲತ್‌ನ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.