

ನರಗುಂದ: ಇಲ್ಲಿನ ನ್ಯಾಯಾಲಯದಲ್ಲಿ ಜು. 12ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು, ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ರಾಜೀ ಸಂಧಾನದಲ್ಲಿ ಭಾಗಿಯಾಗಿ ತಮಗಾಗುವ ಅರ್ಥಿಕ ಹೊರೆ ಹಾಗೂ ಸಮಯ ಪೋಲಾಗುವುದನ್ನು ತಪ್ಪಿಸಲು ಮೊದಲಿನ ಬಾಂಧವ್ಯ ಉಳಿಸಿಕೊಳ್ಳಲು ತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ದಿವಾಣಿ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ಸದಸ್ಯರೂ ಆದ ಜೀನಪ್ಪ ಚೌಗಲಾ ತಿಳಿಸಿದ್ದಾರೆ.
ಸಿವಿಲ್ ದಾವೆಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಕಾರ್ಮಿಕ ಪ್ರಕರಣಗಳು, ಎಂಎಂಆರ್‌ಡಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಜೀವನಾಂಶ ಪ್ರಕರಣಗಳು ಹಾಗೂ ರಾಜಿ ಆಗಲು ಅರ್ಹವಿರುವ ಎಲ್ಲ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳನ್ನು ಗುರುತಿಸಲಾಗಿದೆ. ಪ್ರತಿದಿನ ಆಯ್ಕೆ ಮಾಡಿದ ಪ್ರಕರಣಗಳನ್ನು ಸಂಬಂಧಪಟ್ಟ ವಕೀಲರು ಹಾಗೂ ಪಕ್ಷಿಗಾರರೊಂದಿಗೆ ಮುಂಚಿತವಾಗಿಯೇ ರಾಜೀ ಸಂಧಾನದಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿ ಅವರ ಮನವೊಲಿಸಿ ಸಂಧಾನ ಮಾಡಿಕೊಳ್ಳಲು ತಿಳಿಸಲಾಗುವುದು. ಪ್ರಕರಣಗಳಿಗೆ ಸಂಬಂಧಪಟ್ಟ ವಕೀಲರು, ಕಕ್ಷಿದಾರರು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳು. ಇಲಾಖೆಗಳವರು ಜು. 12ರಂದು ಜರಗುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪಾಲ್ಗೊಂಡು ತಮ್ಮ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.