

ಧಾರವಾಡ: ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 1,005 ಪ್ರಕರಣಗಳ ಪೈಕಿ 272 ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಇಲ್ಲಿನ ಹೈಕೋರ್ಟ್ ಪೀಠದ ಹಿರಿಯ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಹೇಳಿದರು.
ಹೈಕೋರ್ಟ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ, ಹಂಚಾಟೆ ಸಂಜೀವಕುಮಾರ, ರಾಮಚಂದ್ರ ಡಿ. ಹುದ್ದಾರ ಮತ್ತು ವಿಜಯಕುಮಾರ ಎ. ಪಾಟೀಲ ಅವರೊಂದಿಗೆ ಲೋಕ ಅದಾಲತ್‌ನ ಸದಸ್ಯರಾದ ಶ್ರೀವತ್ಸ ಹೆಗಡೆ, ಎಸ್.ಎಸ್. ಬಾದವಡಗಿ, ವಿ.ಜಿ. ದಳವಾಯಿ, ಡಿ.ಜೆ. ನಾಯ್ಕ ಮತ್ತು ಪ್ರಶಾಂತ ಮಠಪತಿ ಅವರನ್ನೊಳಗೊಂಡ 5 ಪೀಠಗಳನ್ನು ಆಯೋಜಿಸಲಾಗಿತ್ತು.
ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇತ್ಯರ್ಥಗೊಂಡಿವೆ. ವಿಶೇಷವೆಂದರೆ ಸುಮಾರು 40 ವರ್ಷದ ಹಳೆಯ ದಿವಾಣಿ ಪ್ರಕರಣವನ್ನು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ಹಾಗೂ ನ್ಯಾಯಮೂರ್ತಿ ವಿಜಯಕುಮಾರ ಎ. ಪಾಟೀಲ ಅವರಿದ್ದ ವಿಶೇಷ ಪೀಠವು ಪಕ್ಷಗಾರರ ವಕೀಲರಾದ ಡಿ.ಎಂ. ಕುಲಕರ್ಣಿ ಹಾಗೂ ಮಹಾಂತೇಶ ಮಠದ ಅವರ ಸಹಕಾರದಿಂದ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದರು.
ಅದಾಲತ್‌ನಲ್ಲಿ ಸಾಮಾನ್ಯವಾಗಿ ಮೋಟಾರ್ ವಾಹನ ಅಪಘಾತ ಪ್ರಕರಣಕಗಳನ್ನು ವಿಲೇವಾರಿ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ವಿಭಿನ್ನವಾಗಿ ಆಲೋಚಿಸಿ ರಿಟ್ ಅರ್ಜಿಗಳನ್ನು ಸಂಧಾನಕ್ಕೆ ತೆಗೆದುಕೊಂಡು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೆ.ಎಂ. ಗಂಗಾಧರ, ಸರ್ಕಾರಿ ವಕೀಲರಾದ ಜಿ.ಕೆ. ಹಿರೇಗೌಡರ ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು, ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಪಕ್ಷಗಾರರಾಗಿರುವ ಸುಮಾರು 22 ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಸಹಕರಿಸಿದರು ಎಂದರು.