

ಚನ್ನರಾಯಪಟ್ಟಣ : ಐವರು ದಂಪತಿಯ ವೈಮನಸ್ಯ ದೂರ ಮಾಡಿ ಸಹಬಾಳ್ವೆಗೆ ಅನುವು ಮಾಡಿಕೊಟ್ಟಿರುವುದು ಸೇರಿದಂತೆ ಒಟ್ಟು 140 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ದೇವಾನಂದ ತಿಳಿಸಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಚನ್ನರಾಯಪಟ್ಟಣ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ದಿನಪೂರ್ಣ ಹಮ್ಮಿಕೊಂಡಿದ್ದ ಮೆಗಾ ಲೋಕ್‌ಅದಾಲತ್ ನಂತರ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಪಟ್ಟಣದ ಎಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಿ ಎರಡೂ ಕಡೆಯವರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಅದಾಲತ್ ಹಮ್ಮಿಕೊಳ್ಳಲಾಗಿತ್ತು ಎಂದರು. ಹೊಲ, ಮನೆ, ಬ್ಯಾಂಕು, ಅಪಘಾತ, ಚೆಕ್ ಬೌನ್ಸ್, ಜನನ, ಚಿಕ್ಕ ಪುಟ್ಟ ಗಲಾಟೆ, ಆರೋಪ ಸೇರಿದಂತೆ ಹಲವು ರೀತಿಯ ಪ್ರಕರಣಗಳನ್ನು ವಿಚಾರಣೆ ಮಾಡಿ ಇಂದೇ ಅಂತಿಮ ನಿರ್ಣಯ ಎಂದು ಉಲ್ಲೇಖಿಸಿ ಮಂಗಳ ಹಾಡಲಾಗಿದೆ ಎಂದರು.
ವಿವಿಧ ರೀತಿಯ 559 ಪ್ರಕರಣಗಳನ್ನು ಲೋಕ್ ಆದಾಲತ್‌ಗೆ ತೆಗೆದುಕೊಳ್ಳಲಾಗಿತ್ತು. ಅವುಗಳ ಪೈಕಿ 140 ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸಿ, 3,70, 00,000 ರೂ. ಪರಿಹಾರ ನೀಡಲು ಆದೇಶಿಸಲಾಗಿದೆ ಎಂದರು.
ರಾಜೀ ಸಂಧಾನದಿಂದ ಕುಟುಂಬ ಜೀವನ ಸುಧಾರಿಸುತ್ತದೆ. ಪ್ರತಿಯೊಂದಕ್ಕೂ ವ್ಯಾಜ್ಯ ಮಾಡಿ ಕೋರ್ಟಿಗೆ ಬರುವುದು ಒಳ್ಳೆಯದಲ್ಲ. ವ್ಯಾಜ್ಯಗಳನ್ನು ದೂರಮಾಡಿ ಸುಖದಿಂದ ಬಾಳಬೇಕು ಎಂದು ದಾಂಪತ್ಯ ಕುಟುಂಬ ಪ್ರಕರಣದ ವಾದಿ-ಪ್ರತಿವಾದಿಗಳಿಗೆ ಅವರು ತಿಳಿವಳಿಕೆ ನೀಡಿದರು.
ಅದಾಲತ್‌ನಲ್ಲಿ ನ್ಯಾಯವಾದಿಗಳು, ವಕೀಲರು, ವಾದಿ ಮತ್ತು ಪ್ರತಿವಾದಿಗಳು ಭಾಗವಹಿಸಿದ್ದರು.