

ಮಡಿಕೇರಿ: ಪರೀಕ್ಷೆ ರಣಾಂಗಣವಲ್ಲ. ಬದಲಾಗಿ ಅದೊಂದು ಕ್ರೀಡಾಂಗಣದಂತೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಆಯೋಜನೆ ಉದ್ದೇಶದಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ಆರಂಭವಾಗಿರುವ ಕೊಡಗು ವಿಕಸನ ಸಂಸ್ಥೆಯ ಲಾಂಛನವನ್ನು ಭಾನುವಾರ ಬಿಡುಗಡೆ ಮಾಡಿ ಮಾತನಾಡಿದರು.
ವಿಕಸನ ಸಂಸ್ಥೆ ಹಲವು ವರ್ಷದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಶ್ರಮಿಸುತ್ತಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶಾರೀರಿಕ ಹಾಗೂ ಬೌದ್ಧಿಕ ವಿಕಸನಕ್ಕೆ ವಿಶೇಷವಾಗಿ ನೆರವಾಗುತ್ತಿದೆ. ಈ ಕಾರ್ಯದಲ್ಲಿ ಉತ್ತಮ ಯಶಸ್ಸು ಕಾಣುತ್ತಿದ್ದು, ಅದೇ ಸದುದ್ದೇಶದಿಂದ ಕೊಡಗಿನಲ್ಲಿ ಸಂಸ್ಥೆ ಹುಟ್ಟು ಹಾಕಿರುವುದು ಸ್ವಾಗತಾರ್ಹ ನಡೆ ಎಂದರು.
ಕೊಡಗಿನಲ್ಲಿ ಹಲವು ರೀತಿಯ ವಿಕಸನದ ಅಗತ್ಯವಿದೆ. ಅದರಲ್ಲೂ ಶಾಲಾ ವಿದ್ಯಾರ್ಥಿಗಳು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುವಂತೆ ಮಾಡಬೇಕು. ಲವಲವಿಕೆ, ಉತ್ಸಾಹದಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂಬುದು ನಮ್ಮ ಅಭಿಲಾಷೆ. ಆ ಹಿನ್ನೆಲೆಯಲ್ಲಿ ಕೊಡಗು ವಿಕಸನ ಕೂಡಾ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಮಡಿಕೇರಿಯ ರೋಹಿತ್ ಕಲ್ಲೇಗ ಲೋಗೋ ವಿನ್ಯಾಸ ಮಾಡಿದ್ದಾರೆ. ಕೊಡಗು ವಿಕಸನ ಬಳಗದ ಚೈಯ್ಯಂಡ ಸತ್ಯ ಗಣಪತಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಿಶೋರ್ ರೈ ಕತ್ತಲೆಕಾಡು, ಶೇಖರ್, ರಾಜಾಜಿನಗರ ವಿಕಸನ ಪದಾಧಿಕಾರಿಗಳಾದ ಲಿಂಗರಾಜು, ಸುನೀಲ್ ಶಿವಾನಂದ ಇದ್ದರು.
11ಕ್ಕೆ ಮೊದಲ ಕಾರ್ಯಕ್ರಮ: ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜ.11ರಂದು ’ಕೊಡಗು ವಿಕಸನ’ ಸಂಸ್ಥೆಯ ಮೊದಲ ಕಾರ್ಯಕ್ರಮ ನಡೆಯಲಿದೆ. ಮಡಿಕೇರಿಯ ಸಂತ ಜೋಸೆಫರ ವಿದ್ಯಾಸಂಸ್ಥೆ ಸಭಾಂಗಣ ಹಾಗೂ ನಾಪೋಕ್ಲುವಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಅಂತಾರಾಷ್ಟ್ರೀಯ ಅಥ್ಲಿಟ್ ತೀತಮಾಡ ಅರ್ಜುನ್ ದೇವಯ್ಯ ಉಪನ್ಯಾಸ ನೀಡಲಿದ್ದಾರೆ. ನಂತರದಲ್ಲಿ ಫೆಬ್ರವರಿ ಅಂತ್ಯದವರೆಗೆ ಪ್ರತಿ ಶನಿವಾರ ವಿಷಯ ತಜ್ಞರಿಂದ ವಿಶೇಷ ತರಗತಿ ನಡೆಯಲಿದೆ. ಎರಡು ವಿಭಾಗಕ್ಕೊಳಪಟ್ಟ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದರ ಸದಯಪುಓಗ ಪಡೆಯಬಹುದಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.