

ವಿಜಯವಾಣಿ ಸುದ್ದಿಜಾಲ ಧಾರವಾಡ
ಉಪನ್ಯಾಸಗಳು, ವಿಚಾರ ಸಂಕಿರಣಗಳು ಕಲಿಕೆ ಜತೆಗೆ ಸಂಶೋಧನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಈ ನಿಟ್ಟಿನಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯು ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಾ ಬಂದಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಕರ್ನಾಟಕ ವಿಶ್ವ ವಿದ್ಯಾಲಯದ ಗಣಿತಶಾಸ್ತ್ರ ವಿಭಾಗವು ಪಾವಟೆ ಇನ್ಸ್ಟಿಟ್ಯೂಟ್ ಆಫ ಮ್ಯಾಥಮೆಟಿಕಲ್ ಸೈನ್ಸ್ ಮತ್ತು ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿರುವ ಗಣಿತ ವಿಶ್ಲೇಷಣೆ ಮತ್ತು ಅದರ ಅನ್ವಯಗಳ ಕುರಿತು 3 ದಿನಗಳ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕವಿವಿ ಗಣಿತಶಾಸ್ತ್ರ ವಿಭಾಗವು ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಏರ್ಪಡಿಸಿರುವುದು ವಿದ್ಯಾರ್ಥಿ ಸಮೂಹಕ್ಕೆ ಸಹಕಾರಿ. ಯುವ ಗಣಿತ ಶಾಸ್ತ್ರಜ್ಞರು ಬೆಳೆಸುವಲ್ಲಿ ವಿಭಾಗ ಶ್ರಮಿಸುತ್ತಿದೆ. ಅಲ್ಲದೆ ಪಾವಟೆಯವರು ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿರುವುದು ಸೌಭಾಗ್ಯ. ವಿದ್ಯಾರ್ಥಿಗಳೆಲ್ಲರೂ ಅವರಂತಾಗಲು ಪ್ರಯತ್ನಿಸಬೇಕು ಹಾಗೂ ಅವರನ್ನು ಅನುಸರಿಸಿಬೇಕು ಎಂದರು.
ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿ, ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ ಅವರಿಂದ ಜ್ಞಾನ ಪಡೆಯಬೇಕು. ಜತೆಗೆ ವಿವಿಯ ನೈಸರ್ಗಿಕ ಸೌಂದರ್ಯ ಆನಂದಿಸಿ ಎಂದರು.
ಕವಿವಿ ಮಾಜಿ ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ ಮಾತನಾಡಿ, ತರ್ಕವು ಗಣಿತ ಶಾಸ್ತ್ರದ ಅಡಿಪಾಯ. ಡಾ. ಡಿ. ಸಿ ಪಾವಟೆ ಜನ್ಮದಿನದಂದು ಇಂತಹ ಒಳ್ಳೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ ಎಂದರು.
ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ, ಡಾ. ಎ.ಚನ್ನಪ್ಪ, ಡಾ. ಆರ್ಯಕುಮಾರ ಚಂದ, ಪ್ರೊ. ಎನ್.ಬಿ. ನಡುವಿನಮನಿ, ಡಾ. ಜಿ. ಹರಿಹರನ್, ಡಾ. ಸಿ. ಕೃಷ್ಣಮೂರ್ತಿ, ಪ್ರೊ. ಎಸ್.ಸಿ. ಸಿರಾಳಶೆಟ್ಟಿ, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಇತರರು ಇದ್ದರು.
ಪ್ರೊ. ಪಿ.ಜಿ. ಪಾಟೀಲ ಸ್ವಾಗತಿಸಿದರು. ಸಾನಿಯಾ ಜಿದ್ದಿ ಮತ್ತು ಸ್ವಾತಿ ಜೋಶಿ ನಿರೂಪಿಸಿದರು. ಆರ್. ಎಸ್. ದ್ಯಾವನಾಳ ವಂದಿಸಿದರು.