ಲಾಕಪ್ ಡೆತ್?: ಖಾಕಿ ವಿರುದ್ಧ ಪ್ರತಿಭಟನೆ, ಸಿಐಡಿ ತನಿಖೆ ಶುರು

Lockup death
Published on

ದಾವಣಗೆರೆ: ಮಾಯಕೊಂಡ ಪೊಲೀಸರು ವಶಕ್ಕೆ ಪಡೆದ ಬಳಿಕ ಅನುಮಾನಾಸ್ಪವಾಗಿ ಮೃತಪಟ್ಟಿದ್ದ ವಿಠಲಾಪುರ ಗ್ರಾಮದ ಮರುಳಸಿದ್ದಪ್ಪ ಎಂಬಾತನ ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, ತನಿಖೆ ಆರಂಭಗೊಂಡಿದೆ.

ಲಾಕಪ್ ಡೆತ್ ಆರೋಪ ಕೇಳಿಬಂದ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್​ಐ ಪ್ರಕಾಶ್, ಹೆಡ್ ಕಾನ್​ಸ್ಟೆಬಲ್ ನಾಗರಾಜ್ ಮತ್ತು ಕಾನ್​ಸ್ಟೆಬಲ್ ಶೇರ್ ಬಂಧಿಸಲಾಗಿತ್ತು. ಬುಧವಾರ ಠಾಣೆಯ ಮತ್ತೊಬ್ಬ ಸಿಬ್ಬಂದಿ ರಂಗಸ್ವಾಮಿಯನ್ನು ಅಮಾನತುಗೊಳಿಸಲಾಗಿದೆ. ಬುಧವಾರ ಬೆಳಗ್ಗೆ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ, ಜೆಎಂಎಫ್​ಸಿ 3ನೇ ನ್ಯಾಯಾಲಯದ ನ್ಯಾಯಾಧೀಶೆ ನಂದಿನಿ ಸಮಕ್ಷಮದಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಇದೇ ವೇಳೆ ಮೃತನ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ 4.12 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಜಿಲ್ಲಾಧಿಕಾರಿ ವಿತರಿಸಿ ದರು. ನಂತರ ವಿಠಲಾಪುರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಬೆಳಗ್ಗೆ ಮಾಯಕೊಂಡದಲ್ಲಿ ಮೃತನ ಸಂಬಂಧಿಕರು ನ್ಯಾಯ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು.

ಪ್ರಕರಣ ಹಿನ್ನೆಲೆ: ಮರುಳಸಿದ್ದಪ್ಪನ ಒಬ್ಬ ಪುತ್ರ ಇತ್ತೀಚೆಗೆ ತೀರಿಕೊಂಡಿದ್ದಾನೆ. ಪುತ್ರಿಗೆ ಮದುವೆಯಾಗಿದೆ. ಗಂಡು ಸಂತಾನ ಬೇಕೆಂಬ ಕಾರಣಕ್ಕೆ ಮರುಳಸಿದ್ದಪ್ಪ ಕೆಲ ದಿನಗಳ ಹಿಂದೆ ಇನ್ನೊಂದು ವಿವಾಹವಾಗಿದ್ದ ಎನ್ನಲಾಗಿದೆ. ಈ ನಡುವೆ ತನ್ನ ಪತಿ ನಾಪತ್ತೆಯಾಗಿದ್ದು, ಹುಡುಕಿಕೊಡಿ. ಆತ ಇನ್ನೊಂದು ಮದುವೆ ಯಾಗುವುದನ್ನು ತಡೆಯಿರಿ ಎಂದು ಪೊಲೀಸರಿಗೆ ಪತ್ನಿ ವೃಂದಮ್ಮ ದೂರು ನೀಡಿದ್ದರು.

ಅನುಮಾನದ ಹುತ್ತ: ಮರುಳಸಿದ್ದಪ್ಪನ ಸಾವಿನ ಕಾರಣ ನಿಗೂಢವಾಗಿರುವಂತೆಯೇ ಸಿಐಡಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಶುರುವಾಗಿದೆ. ವೃಂದಮ್ಮ ನೀಡಿದ ದೂರು ಆಧರಿಸಿ ಪೊಲೀಸರು ಮರುಳಸಿದ್ದಪ್ಪನನ್ನು ಸೋಮವಾರ ಠಾಣೆಗೆ ಕರೆತಂದಿದ್ದರು. ಅಂದು ರಾತ್ರಿ ಠಾಣೆಗೆ ಹೋಗಿದ್ದ ಸಂಬಂಧಿಕರು ಆತನನ್ನು ಕಳಿಸುವಂತೆ ಕೇಳಿಕೊಂಡಿದ್ದರು, ಆದರೆ ಪೊಲೀಸರು ಕಳಿಸಿರಲಿಲ್ಲ. ಮರುಳಸಿದ್ದಪ್ಪನನ್ನು ಠಾಣೆಯಲ್ಲೇ ಉಳಿಸಿಕೊಳ್ಳುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಜನರಿಂದ ಕೇಳಿಬಂದಿದೆ. ಮಂಗಳವಾರ ಬೆಳಗ್ಗೆ ಹೊತ್ತಿಗೆ ಆತನ ಮೃತದೇಹ ಗ್ರಾಮದ ಉಗ್ರಾಣ ನಿಗಮದ ಬಳಿಯ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು ಹೇಗೆ ಎಂಬುದು ನಿಗೂಢವಾಗಿದೆ. ಆತನಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ರಾತ್ರಿಯೇ ಠಾಣೆಯಿಂದ ಕಳಿಸಿಕೊಡಲಾಯಿತೆಂಬ ಮಾತೂ ಕೇಳಿಬಂದಿದೆ. ಹಾಗೊಂದು ವೇಳೆ ಆರೋಗ್ಯ ಸಮಸ್ಯೆ ಆಗಿದ್ದರೆ ಆಸ್ಪತ್ರೆಗೆ ಸೇರಿಸಬೇಕಿತ್ತು, ಇಲ್ಲವೇ ಸಂಬಂಧಿಕರಿಗೆ ತಿಳಿಸಬೇಕಿತ್ತು. ಆದರೆ ಪೊಲೀಸರು ಹಾಗೆ ಮಾಡದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಮೃತನ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆ ಯಿಂದ 8,25,000 ರೂ. ಪರಿಹಾರ ನೀಡಲು ಅವಕಾಶವಿದೆ. ಈಗ ಶೇ. 50 ಪರಿಹಾರ ನೀಡಿದ್ದೇವೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಉಳಿದ ಪರಿಹಾರ ಬಿಡುಗಡೆ ಆಗಲಿದೆ. | ಮಹಾಂತೇಶ ಬೀಳಗಿ ಜಿಲ್ಲಾಧಿಕಾರಿ ಸಿಐಡಿ ತನಿಖೆ ಆರಂಭಗೊಂಡಿದೆ. ರಾಷ್ಟ್ರೀಯ, ರಾಜ್ಯ ಮಾನವ ಹಕ್ಕು ಗಳ ಆಯೋಗಕ್ಕೂ ವರದಿ ಸಲ್ಲಿಸಲಾಗುವುದು. | ಹನುಮಂತರಾಯ ಎಸ್​ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net