

ಪಾಂಡವಪುರ : ಪಾಂಡವಪುರ ಪುರಸಭೆ ಆಡಳಿತ ಮಂಡಳಿಯ 5 ವರ್ಷಗಳ ಆಡಳಿತಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕೊಠಡಿಗಳ ಬಾಗಿಲು ಬಂದ್ ಮಾಡಲಾಗಿದೆ.
2018ರಲ್ಲಿ ಇಲ್ಲಿನ ಪುರಸಭೆ ಆಡಳಿತ ಮಂಡಳಿಗೆ ಚುನಾವಣೆ ನಡೆದು 23 ಸದಸ್ಯರು ಚುನಾಯಿತರಾಗಿದ್ದರು. ಸರ್ಕಾರ ಪ್ರಾರಂಭದ ಎರಡು ವರ್ಷದವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಮೀಸಲಾತಿ ಪ್ರಟಿಸದ ಕಾರಣ ಚುನಾಯಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸದೆ ಅಧಿಕಾರ ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ 2020 ರಿಂದ 2025 ಅ.23ರವರೆಗೆ ಅಧಿಕಾರಾವಧಿ ವಿಸ್ತರಣೆ ಮಾಡಲಾಯಿತು. 2020ರಲ್ಲಿ ಸರ್ಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ಮಿಸಲಾತಿ ನಿಗದಿಪಡಿಸಿದ ಪರಿಣಾಮ ಆಡಳಿತ ಮಂಡಳಿಯ ಪ್ರಥಮ ಸಾಮಾನ್ಯ ಸಭೆ ನಡೆಯಿತು. ಮೊದಲ 30 ತಿಂಗಳ ಅವಧಿಗೆ ಅಧ್ಯಕ್ಷಗಾದಿ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಈ ಅವಧಿಯಲ್ಲಿ 17 ವಾರ್ಡ್‌ನಿಂದ ಚುನಾಯಿತರಾಗಿದ್ದ ಅರ್ಚನಾ ಚಂದ್ರು ಅಧ್ಯಕ್ಷರಾಗಿ ಹಾಗೂ 20ನೇ ವಾರ್ಡ್‌ನಿಂದ ಚುನಾಯಿತರಾಗಿದ್ದ ಶ್ವೇತಾ ಉಮೇಶ್ ಅವರು ಉಪಾಧ್ಯಕ್ಷರಾಗಿ ಆಡಳಿತ ನಡೆಸಿದರು.
ಎರಡನೇ ಅವಧಿಗೆ ಮೀಸಲಾತಿ ನಿಗದಿಪಡಿಸಲು ಸರ್ಕಾರ 16 ತಿಂಗಳು ಕಾಲ ವಿಳಂಬ ಮಾಡಿದ್ದರಿಂದ ಈ ಅವಧಿಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಪುರಸಭೆ ಆಡಳಿತಾಧಿಕಾರಿ ನೇಮಕವಾಗಿ ಆಡಳಿತ ನಡೆಸಿದ್ದರು. ಆಡಳಿತಾಧಿಕಾರಿ ನೇಮಕವಾಗಿದ್ದ ಅವಧಿಯಲ್ಲಿ ನಮ್ಮ ಅಧಿಕಾರ ಮೊಟಕುಗೊಂಡಿದೆ. ಹೀಗಾಗಿ, ಈ ಅವಧಿಯಲ್ಲಿನ ಅಧಿಕಾರವನ್ನು ಹೆಚ್ಚುವರಿಯಾಗಿ ನೀಡಬೇಕು ಎಂಬುದು ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ವಾದವಾಗಿದ್ದು, ಅಧಿಕಾರ ವಿಸ್ತರಿಸಲು ಚುನಾವಣಾ ಆಯೋಗ ಮತ್ತು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಪುರಸಭೆ ಆಡಳಿತ ಮಂಡಳಿಯ ಎಲ್ಲ ಸದಸ್ಯರು ವಕೀಲರ ಮೂಲಕ ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧ ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಪುರಸಭೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡದಂತೆ ಸೂಚನೆ ನೀಡಿದೆ. ಆದರೆ, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಅಧಿಕಾರವಧಿ ಬಗ್ಗೆ ಯಾವುದೇ ನಿರ್ದೇಶನ ನೀಡಿಲ್ಲ. ಆದ್ದರಿಂದ ಪುರಸಭೆ ಅಧಿಕಾರಿಗಳು ಗೊಂದಲದಲ್ಲಿ ಇದ್ದಾರೆ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನ.3ಕ್ಕೆ ಮುಂದೂಡಿದೆ. ಸರ್ಕಾರ ಎರಡನೇ ಅವಧಿಯ ಮೀಸಲಾತಿಯನ್ನು 16 ತಿಂಗಳುಗಳ ಕಾಲ ವಿಳಂಬವಾಗಿ ಪ್ರಕಟಿಸಿತ್ತು. ಈ ಅವಧಿಯಲ್ಲಿ ಪುರಸಭೆ 9ನೇ ವಾರ್ಡ್‌ನ ಸದಸ್ಯ ಬಿ.ವೈ.ಬಾಬು ಅವರು ಅಪಘಾತದಲ್ಲಿ ಮೃತರಾದ ಪರಿಣಾಮ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ಜ್ಯೋತಿಲಕ್ಷ್ಮೀ ಬಾಬು ಗೆಲುವು ಸಾಧಿಸಿ ಇನ್ನುಳಿದ ಅವಧಿಗೆ ಅಧ್ಯಕ್ಷರಾಗಿ ಹಾಗೂ ಬಿಜೆಪಿ, ಜೆಡಿಎಸ್ ಮೈತ್ರಿ ಪರಿಣಾಮ ಬಿಜೆಪಿಯಿಂದ ಚುನಾಯಿತರಾಗಿದ್ದ ಏಕೈಕ ಸದಸ್ಯ ಎಲ್.ಅಶೋಕ್ ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿದರು.
ಪೌರಾಡಳಿತ ಕಾಯ್ದೆ ಪ್ರಕಾರ ಪುರಸಭೆ ಆಡಳಿತ ಮಂಡಳಿಯ ಅಧಿಕಾರಾವಧಿ 2025 ಅ.23ಕ್ಕೆ ಮುಕ್ತಾಯಗೊಂಡಿದೆ. ಈ ಸಂಬಂಧ ರಾಜ್ಯ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಅರ್ಜಿಯ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಲಯ ಆಡಳಿತಾಧಿಕಾರಿಯನ್ನು ನೇಮಕ ಮಾಡದಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಆದರೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರದ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ಈ ಬಗ್ಗೆ ನಿರ್ದೇಶನ ನಿಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರೆ ಅದರಂತೆ ನಡೆದುಕೊಳ್ಳಲಾಗುವುದು.
ಸತೀಶ್‌ಕುಮಾರ್
ಪುರಸಭೆ ಮುಖ್ಯಾಧಿಕಾರಿ, ಪಾಂಡವಪುರ
--------
ಪಾಂಡವಪುರ ಉಪಾವಿಭಾಗಾಧಿಕಾರಿಗಳು ಆಡಳಿತಾಧಿಕಾರಿಗಯಾಗಿ ನೇಮಕವಾಗಿದ್ದ ಸಂದರ್ಭದಲ್ಲಿ ಪುರಸಭೆ ಸದಸ್ಯರು ಅಧಿಕಾರದಿಂದ ವಂಚಿತರಾಗಿದ್ದರು. ಈ ಅವಧಿಯಲ್ಲಿನ 16 ತಿಂಗಳುಗಳ ಕಾಲದ ಅಧಿಕಾರವನ್ನು ಹೆಚ್ಚುವರಿಯಾಗಿ ನೀಡಬೇಕು. ಇಲ್ಲವೇ ಚುನಾವಣಾ ದಿನಾಂಕ ನಿಧಿಯಾಗುವವರೆಗೆ ನಮ್ಮನ್ನು ಅಧಿಕಾರದಲ್ಲಿ ಮುಂದುವರೆಸಬೇಕು. ಕೋರ್ಟ್‌ಯಾವುದೇ ತೀರ್ಪು ನೀಡಿದರೂ ಅದನ್ನು ನಾವು ಸ್ವಾಗತಿಸುತ್ತೇವೆ.
ಪಾರ್ಥಸಾರಥಿ
5ನೇ ವಾರ್ಡ್ ಪುರಸಭೆ ಸದಸ್ಯ