ಲಾಕ್‌ಡೌನ್‌, ನಿಯಮ ಉಲ್ಲಂಘಿಸಿದವರಿಗೆ ಲಾಠಿ ರುಚಿ ತೋರಿಸಿದ ರಾಯಚೂರು ಪೊಲೀಸರು

Raichur Lockdown
ರಾಯಚೂರಿನ ಬಸವೇಶ್ವರ ವೃತ್ತದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸೋಮವಾರ ರಸ್ತೆಗಿಳಿದ ವಾಹನ ಸವಾರನಿಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಎಚ್ಚರಿಕೆ ನೀಡಿದರು.
Published on

ರಾಯಚೂರು: ಜಿಲ್ಲಾದ್ಯಂತ ಲಾಕ್‌ಡೌನ್‌ನನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಪೊಲೀಸರು ಸೋಮವಾರ ಅನಗತ್ಯವಾಗಿ ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸುವ ಜತೆಗೆ 100ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯುವ ಮೂಲಕ ಬಿಸಿ ಮುಟ್ಟಿಸಿದರು.

ಬೆಳಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಬಡಾವಣೆಯಲ್ಲಿ ಅಂಗಡಿಗಳಲ್ಲೇ ಖರೀದಿಸುವಂತೆ ಸೂಚನೆ ನೀಡಲಾಗಿದ್ದರೂ ಹಲವರು ವಾಹನದಲ್ಲಿ ಖರೀದಿಗೆಂದು ರಸ್ತೆಗಿಳಿದಿದ್ದರು. ಪೊಲೀಸರು ಅಂತವರಿಗೆ ವಾರ್ನಿಂಗ್ ನೀಡಿ ವಾಪಸ್ ಕಳುಹಿಸಿದರು.

ಬೆಳಗ್ಗೆ 10 ಗಂಟೆ ನಂತರದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳ ತಪಾಸಣೆ ನಡೆಸಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಿ ಅನಗತ್ಯವಾಗಿ ಬಂದ ವಾಹನಗಳನ್ನು ವಶ ಪಡೆದು 14 ದಿನಗಳ ನಂತರ ಬಂದು ವಾಹನ ತೆಗೆದುಕೊಂಡು ಹೋಗುವಂತೆ ತಿಳಿಸಲಾಯಿತು. ಕೆಲವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಲಾಯಿತು.

ಎಸ್ಪಿ ಪ್ರಕಾಶ ನಿಕಮ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಸ್ವತಃ ರಸ್ತೆಯಲ್ಲಿ ನಿಂತು ವಾಹನಗಳನ್ನು ತಪಾಸಣೆ ನಡೆಸಿದರು. ಈ ವೇಳೆ ಆಸ್ಪತ್ರೆ ಮುಂತಾದ ನೆಪ ಹೇಳಿದ ವಾಹನ ಸವಾರರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಿದರು. ಪ್ರಮುಖ ವೃತ್ತಗಳಲ್ಲಿ ಕಾರಣವಿಲ್ಲದೆ ರಸ್ತೆಗಿಳಿದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಅವರ ವಾಹನಗಳನ್ನು ಜಪ್ತಿ ಮಾಡಿದರು. ಮತ್ತೊಂದೆಡೆ ದ್ವಿಚಕ್ರ ವಾಹನ ಸವಾರರು ಪೊಲೀಸರ ಕಣ್ಣು ತಪ್ಪಿಸಿ ಸಂದಿಗೊಂದಿಯಲ್ಲಿ ಓಡಾಡುತ್ತಿರುವುದು ಕಂಡು ಬರುತ್ತಿತ್ತು.

ಪಾಸಿಟಿವ್ ಎಂದ ಸವಾರ
ನಗರದ ಅಂಬೇಡ್ಕರ್ ವೃತ್ತದಲ್ಲಿ ವಾಹನ ತಪಾಸಣೆ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಯುವಕನೊಬ್ಬನ ವಿಚಾರಣೆ ನಡೆಸಿದಾಗ ನನಗೆ ಕರೊನಾ ಪಾಸಿಟಿವ್ ಬಂದಿದ್ದು, ಔಷಧ ತೆಗೆದುಕೊಳ್ಳಲು ಹೋಗುತ್ತಿರುವುದಾಗಿ ಹೇಳಿದಾಗ ಸ್ಥಳದಲ್ಲಿದ್ದವರು ಹೌಹಾರಿದರು. ಸ್ಥಳದಲ್ಲಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಪಾಸಿಟಿವ್ ಬಂದಿದ್ದರೂ ಸಾರ್ವಜನಿಕವಾಗಿ ಓಡಾಡುತ್ತಿರುವುದಕ್ಕೆ ಯುವಕನನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಅಂಬುಲೆನ್ಸ್ ತರಿಸಿ ರಿಮ್ಸ್ ಆಸ್ಪತ್ರೆಗೆ ಕಳುಹಿಸಲು ಮುಂದಾದಾಗ ಸೋಂಕು ನನಗಲ್ಲ ನಮ್ಮ ತಾಯಿಗೆ ಬಂದಿದೆ ಎಂದು ಯುವಕ ಹೇಳಿದ. ಆದರೂ ಮುಂಜಾಗ್ರತಾ ಕ್ರಮವಾಗಿ ಆತನನ್ನು ಆಸ್ಪತ್ರೆಗೆ ಕಳುಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net