ಲಾಕ್​ಡೌನ್ ಇದ್ರೂ ರಸ್ತೆಗಿಳಿದ 12,050 ವಾಹನಗಳ ಜಪ್ತಿ: ಈ ಪೈಕಿ 9,815ಕ್ಕೂ ಅಧಿಕ ದ್ವಿಚಕ್ರವಾಹನ

mng new
Published on

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದರೂ ಅನಗತ್ಯವಾಗಿ ಸಂಚರಿಸುತ್ತಿದ್ದ 12,050 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಆಗ್ನೇಯ, ಈಶಾನ್ಯ, ವೈಟ್​ಫೀಲ್ಡ್ ಮತ್ತು ಕೇಂದ್ರ ವಿಭಾಗಗಳಲ್ಲಿ ಶುಕ್ರವಾರ ಮುಂಜಾನೆಯಿಂದಲೇ ರಸ್ತೆಗಿಳಿದ್ದ ನೂರಾರು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಆಯಾ ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದಾರೆ. ಪೊಲೀಸರು ಈ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದರೂ ಅದನ್ನು ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಓಡಾಡುವವರ ಸಂಖ್ಯೆ ನಗರದಲ್ಲಿ ಹೆಚ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕರೊನಾ ಭೀತಿ ಹಿನ್ನಲೆಯಲ್ಲಿ ಹಣ್ಣು, ತರಕಾರಿ, ಹಾಲು, ಔಷಧ ಸೇರಿ ಮೂಲಸೌಕರ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ಎಲ್ಲ ವಾಹನ ಸಂಚಾರ ನಿಷೇಧಿಸಲಾಗಿದೆ.

14ರ ನಂತರ ವಾಹನ ವಾಪಸ್: 9,815ಕ್ಕೂ ಅಧಿಕ ದ್ವಿಚಕ್ರವಾಹನ, 349ಕ್ಕೂ ಅಧಿಕ ಆಟೋಗಳು, 427ಕ್ಕೂ ಹೆಚ್ಚು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಾಹನಗಳನ್ನು ಮಾ.14ರ ನಂತರವೇ ಮಾಲೀಕರಿಗೆ ಹಿಂದಿರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net