ಲಾಕ್‌ಡೌನ್ ಉಲ್ಲಂಘನೆ, ಲಗುನ ಗಾರ್ಮೆಂಟ್ಸ್ ಉತ್ಪಾದನೆ ಸ್ಥಗಿತಗೊಳಿಸಲು ಪಟ್ಟು

20 KKP 01
Published on

ಕನಕಪುರ: ತಾಲೂಕಿನ ಶಿವನಹಳ್ಳಿ ಸಮೀಪದ ಕಾಳೇಗೌಡನದೊಡ್ಡಿಯ ಲಗುನ ಗಾರ್ಮೆಂಟ್ಸ್ ಸಂಸ್ಥೆ ಸರ್ಕಾರದ ಲಾಕ್‌ಡೌನ್ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾರಂಭ ಮಾಡಿರುವುದು ಸಾರ್ವಜನಿಕರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಕರೊನಾ ಸೋಂಕಿನಿಂದಾಗಿ ಜನತೆ ಆತಂಕದಲ್ಲಿರುವ ಸಂದರ್ಭದಲ್ಲಿ ಈ ಗಾರ್ಮೆಂಟ್ಸ್ ಸೋಮವಾರ ಬೆಳಗ್ಗೆ 500ಕ್ಕೂ ಹೆಚ್ಚು ಕಾರ್ಮಿಕರನ್ನು ಸೇರಿಸಿ ಕಾರ್ಯಾರಂಭ ಮಾಡಿದೆ. ಇದನ್ನು ಗಮನಿಸಿದ ಸಾರ್ವಜನಿಕರು ವಿಷಯವನ್ನು ತಹಸೀಲ್ದಾರ್ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿ, ಕೂಡಲೇ ಕಾರ್ಖಾನೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.

ಕರೊನಾ ಹೆಮ್ಮಾರಿ ವಿರುದ್ಧ ಹೋರಾಡಲು ಸರ್ಕಾರ ಮೇ 3ರವರೆಗೆ ಲಾಕ್‌ಡೌನ್ ಪಾಲಿಸುವಂತೆ ಜನರಿಗೆ ಸೂಚಿಸಿದೆ. ಇಂತಹ ವೇಳೆಯಲ್ಲಿ ಗಾರ್ಮೆಂಟ್ಸ್ ಬಾಗಿಲು ತೆರೆಯಲು ಅನುಮತಿ ನೀಡಿದವರು ಯಾರು ಎಂಬ ಪ್ರಶ್ನೆ ಎದ್ದಿದೆ. ಮಳವಳ್ಳಿ, ಹಲಗೂರು ಹಾಗೂ ಕನಕಪುರದ ಸುತ್ತಮುತ್ತಲಿಂದ ಬಸ್ ಮತ್ತು ಮೆಟಡಾರ್‌ಗಳಲ್ಲಿ ಕಾರ್ಮಿಕರನ್ನು ಕರೆತಂದಿರುವ ಕಾರ್ಖಾನೆ ಮಾಲೀಕರು ಕೆಲಸ ಆರಂಭಿಸಿದ್ದಾರೆ. ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆ ಘಟನೆ ಮಾಸುವ ಮುನ್ನವೇ ಈ ಕಾರ್ಖಾನೆ ಮಾಲೀಕರು ಕರೊನಾ ಸೋಂಕು ಹರಡಲು ಮುಂದಾಗಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಶಿವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರೇಮಕುಮಾರ್, ಪಿಡಿಒ ವಿನುತಾ ಅವರು ಕರೊನಾ ಟಾಸ್‌‌ಕೆೆರ್ಸ್ ತಂಡದೊಂದಿಗೆ ಗಾರ್ಮೆಂಟ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 400ಕ್ಕೂ ಹೆಚ್ಚು ಮಂದಿ ಕೆಲಸದಲ್ಲಿ ತೊಡಗಿರುವುದನ್ನು ಕಂಡು, ಪಂಚಾಯಿತಿ ಅನುಮತಿಯನ್ನೂ ಪಡೆಯದೆ, ಹಿರಿಯ ಅಧಿಕಾರಿಗಳ ಆದೇಶವೂ ಇಲ್ಲದೆ ಕಾರ್ಖಾನೆ ಆರಂಭಿಸಿರುವ ಬಗ್ಗೆ ಗರಂ ಆದರು. ನಂತರ ಕಾರ್ಮಿಕರನ್ನು ಹೊರಹೋಗುವಂತೆ ಸೂಚಿಸಿದರು.

ಕಾರ್ಖಾನೆ ವ್ಯವಸ್ಥಾಪಕರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಲ್ಲದೆ, ಹೆಚ್ಚಿನ ಕ್ರಮಕ್ಕಾಗಿ ಮೇಲಿನ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ವರದಿ ನೀಡಲಾಗುವುದು ಎಂದರು. ರೆವಿನ್ಯೂ ಇನ್‌ಸ್ಪೆಕ್ಟರ್ ವೆಂಕಟೇಶ್, ಗ್ರಾಮಾಂತರ ಪೊಲೀಸರು, ಪಂಚಾಯಿತಿ ಸಿಬ್ಬಂದಿ, ಗ್ರಾಮಸ್ಥರು ಇದ್ದರು.

ಮಾಸ್ಕ್‌ಗಳನ್ನು ತಯಾರಿಸಿಕೊಡುವ ಬಗ್ಗೆ ಬೇಡಿಕೆ ಬಂದಿತ್ತು. ಅದಕ್ಕಾಗಿ ಸ್ವಲ್ಪ ಕಾರ್ಮಿಕರನ್ನು ಕರೆತಂದು ಕೆಲಸ ನಿರ್ವಹಿಸುತ್ತಿದ್ದೆವು. ಅನುಮತಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಸದಾಶಿವ ವ್ಯವಸ್ಥಾಪಕ, ಎಚ್.ಆರ್ ವಿಭಾಗ, ಲಗುನ ಗಾರ್ಮೆಂಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net