

ಹೊಳೆನರಸೀಪುರ: ಪಟ್ಟಣದಲ್ಲಿ ವರ್ತಕರು ಲಾಕ್‌ಡೌನ್ ಬೆಂಬಲಿಸಿ ಭಾನುವಾರ ಎಲ್ಲ ಅಂಗಡಿಗಳ ಬಾಗಿಲನ್ನು ಹಾಕಿ, ಸಹಮತ ವ್ಯಕ್ತಪಡಿಸಿದರು. ಪೊಲೀಸರು ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದ್ದರು ಹಾಗೂ ಅನಾವಶ್ಯಕವಾಗಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿರುವ ಸವಾರರಿಗೆ ಕಿವಿಮಾತು ಹೇಳಿ ಕಳುಹಿಸಿದರು.
ಪಟ್ಟಣದಲ್ಲಿ 14 ಪ್ರದೇಶಗಳನ್ನು ಸೀಲ್‌ಡೌನ್ ಮಾಡಿರುವ ಹಿನ್ನೆಲೆಯಲ್ಲಿ ವರ್ತಕರು ಭಯಭೀತರಾಗಿದ್ದಾರೆ. ಆದ್ದರಿಂದ ದಿನಸಿ ಅಂಗಡಿಗಳು, ತರಕಾರಿ ಮಾರುಕಟ್ಟೆ ಮತ್ತು ಹೋಟೆಲ್‌ಗಳ ಬಾಗಿಲನ್ನು ಹಾಕಲಾಗಿದೆ.
ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಔಷಧ ಹಾಗೂ ದಿನಸಿ ಪದಾರ್ಥಗಳು, ತರಕಾರಿ, ಮಾಂಸ ಮಾರಾಟ ಮತ್ತು ಹೋಟೆಲ್‌ನಲ್ಲಿ ಪಾರ್ಸೆಲ್ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಆದರೆ ಮಾಂಸ ಮಾರಾಟಕ್ಕೆ ಅವಕಾಶ ಕೊಟ್ಟು, ಕೋಳಿ ಅಂಗಡಿಗಳನ್ನು ಮುಚ್ಚಿಸಲಾಗಿದೆ ಎಂದು ಬಾಗಿಲು ಮುಚ್ಚಿದ್ದ ಕೋಳಿ ಅಂಗಡಿಯ ಮುಂದೆ ಕೆಲ ಗ್ರಾಹಕರು ಬೇಸರ ವ್ಯಕ್ತಪಡಿಸಿದರು.