ಪಾಲನೆಯಾಗದ ಪರಸ್ಪರ ಅಂತರ !

YADGIRI
Published on

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಕರೊನಾ ವೈರಸ್ ಬಾಧೆ ಇಲ್ಲದೆ ಹಸಿರು ವಲಯ ಎಂದು ಗುರುತಿಸಿಕೊಂಡಿರುವ ಜಿಲ್ಲೆಯಲ್ಲಿ ಸರ್ಕಾ ರ ಲಾಕ್ಡೌನ್ ಸಡಿಲಿಕೆ ಮಾಡುತ್ತಿದ್ದಂತೆ ಜನಜೀವನ ಎಂದಿನಂತೆ ಸಾಗಿದ್ದು, ಜನತೆ ಪರಸ್ಪರ ಅಂತರ ಕಾಪಾಡಿಕೊಳ್ಳದಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

40 ದಿನ ಜಿಲ್ಲಾಡಳಿತ ಲಾಕ್ಡೌನ್ ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಕಾರಣ ಜಿಲ್ಲೆಯಲ್ಲಿ ಇದುವರೆಗೆ ಕರೊನಾ ಕೇಸ್ ಪತ್ತೆಯಾಗಿಲ್ಲ. ಹೀಗಾಗಿ ಯಾದಗಿರಿ ಹಸಿರು ವಲಯದ ಪಟ್ಟಿಯಲ್ಲಿ ಗುರುತಿಸಿಕೊಂಡ ಕಾರಣ ಸರ್ಕಾರ ಜನತೆಗೆ ತೊಂದರೆ ಆಗದಿರಲಿ ಎಂದು ಲಾಕ್ಡೌನ್ಗೆ ಕೊಂಚ ರಿಲ್ಯಾಕ್ಸ್ ನೀಡಿದೆ. ಆದರೆ ಜನತೆ ಮಾತ್ರ ಯಾದಗಿರಿ ಜಿಲ್ಲೆ ಕರೊನಾ ಮುಕ್ತವಾಗಿದೆ ಎಂದೇ ಭಾವಿಸಿದಂತಿದೆ.

ಜಿಲ್ಲೆಯಲ್ಲಿ ಪ್ರತಿನಿತ್ಯ ಬೆಳಗ್ಗೆ 6ರಿಂದ ಮಧ್ಯಾಹ್ನ 3ರವರೆಗೆ ಜನತೆ ಅಗತ್ಯ ವಸ್ತುಗಳ ಖರೀದಿ, ಕೃಷಿ ಮತ್ತು ಆಥರ್ಿಕ ಚಟುವಟಿಕೆ ನಡೆಸಲು ಜಿಲ್ಲಾಡಳಿತ ಗ್ರೀನ್ಸಿಗ್ನಲ್ ಕೊಟ್ಟಿದೆ. ಆದರೆ ಪರಸ್ಪರ ಅಂತರ ಕಾಪಾಡುವ ಜತೆಯಲ್ಲಿ ಮುಖಕ್ಕೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಲಾಕ್ಡೌನ್ ಸಡಿಲಿಕೆ ಮಾಡಿದ ಒಂದು ದಿನ ಮಾತ್ರ ಜನ ಪರಸ್ಪರ ಅಂತರ ಪಾಲನೆ ಮಾಡಿದ್ದು, ಕಳೆದೆರಡು ದಿನಗಳಿಂದ ಜನತೆ ಮುಖ್ಯ ರಸ್ತೆಗಳಲ್ಲಿ ಮಾಸ್ಕ್ ಧರಿಸದೆ ಬಿಂದಾಸ್ ತಿರುಗಾಡುತ್ತಿದ್ದಾರೆ.

ಗಾಂಧಿವೃತ್ತ, ಹತ್ತಿಕುಣಿ ವೃತ್ತಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ಜನತೆ ಜಿಲ್ಲಾಡಳಿತದ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ. ಅಗತ್ಯ ಬಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಎಂದು ಜಿಲ್ಲಾಡಳಿತ ಸೂಚನೆ ನೀಡಿದರೂ ಸಾರ್ವಜನಿಕರು ಕಿವಿಗೊಡುತ್ತಿಲ್ಲ.

ಪಕ್ಕದ ಕಲಬುರಗಿಯಲ್ಲಿ ಕರೊನಾ ಅಟ್ಟಹಾಸ ದಿನೇದಿನೆ ಹೆಚ್ಚಾಗುತ್ತಿರುವ ವಿಷಯ ಗೊತ್ತಿದ್ದರೂ ಜಿಲ್ಲೆಯ ಜನತೆ ಎಚ್ಚರ ವಹಿಸದ್ದರಿಂದ ಜಿಲ್ಲಾಡಳಿತ ಇಷ್ಟು ದಿನ ಪಟ್ಟ ಶ್ರಮಕ್ಕೆ ಎಳ್ಳುನೀರು ಬಿಟ್ಟಂತಾಗುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಬೇಕಾದರೆ ಜಿಲ್ಲಾಡಳಿತ ಮೊದಲಿನಿಂತೆ ಲಾಕ್ಡೌನ್ ಜಾರಿಗೊಳಿಸಬೇಕು. ಅಂದಾಗಲೇ ಜನ ಎಚ್ಚೆತ್ತುಕೊಳ್ಳಲು ಸಾಧ್ಯ ಎಂಬ ಮಾತುಗಳು ಪ್ರಜ್ಞಾವಂತ ವಲಯದಿಂದ ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net