

ಕುಷ್ಟಗಿ: ಕಾರ್ಮಿಕ ವರ್ಗಕ್ಕೆ ಲಾಕ್‌ಡೌನ್ ಅವಧಿಯ ಪೂರ್ಣ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಸಿಐಟಿಯು ಕಾರ್ಯಕರ್ತರು, ಗ್ರೇಡ್ 2 ತಹಸೀಲ್ದಾರ್ ವಿಜಯಾ ಮುಂಡರಗಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ನಿಲ್ಲಿಸಬೇಕು. ಕರೊನಾ ಹಿನ್ನೆಲೆ ಕುಟುಂಬದ ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ.ಯಂತೆ ಪಡಿತರ ಉಚಿತ ನೀಡಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿ ಆದೇಶ ಹಿಂಪಡೆಯಬೇಕು. ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣವನ್ನು 200ರೂ.ಗಳಿಗೆ ಹೆಚ್ಚಿಸಬೇಕು. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಕುಟುಂಬಕ್ಕೆ 6ತಿಂಗಳು ವರೆಗೆ ಪ್ರತಿ ತಿಂಗಳು 7500ರೂ.ಗಳನ್ನು ನೇರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಡಿಎ ಕಡಿತಗೊಳಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಸಿಐಟಿಯುನ ತಾಲೂಕು ಅಧ್ಯಕ್ಷೆ ಕಲಾವತಿ ಮೇಣೆಧಾಳ, ಪದಾಧಿಕಾರಿಗಳಾದ ಯಲ್ಲಪ್ಪ ಮೇಣೆಧಾಳ, ಹಲಿಮಾ ದ್ಯಾಂಪುರ, ಅನ್ನಪೂರ್ಣ ಲಿಂಗದಾಳ ಇತರರು ಇದ್ದರು.