

ಆಟೋ ಮಾಯ ಕಸ ಘಟಕ ಆರಂಭದಲ್ಲಿ ಒಣ ಕಸ ಸಂಗ್ರಹಣೆಗೆ ಆಟೋ ನೀಡಲಾಗಿತ್ತು. ಇದಕ್ಕೆ ಸ್ಥಳೀಯ ಮಹಿಳೆಯೊಬ್ಬರು ಚಾಲಕರಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಕೆಲವೇ ತಿಂಗಳಲ್ಲಿ ಇದೆಲ್ಲವೂ ಸ್ಥಬ್ಧವಾಯಿತು. ಅಂದಿನಿಂದ ನಿಯೋಜನೆಗೊಂಡ ಆಟೋ ಇಲ್ಲದಂತಾಗಿದೆ. ಮಹಿಳೆಯ ಉದ್ಯೋಗಕ್ಕೂ ಕೊಕ್ಕೆ ಬಿದ್ದಂತಾಗಿದೆ. ಆರಂಭದಲ್ಲಿ ವಾರಕ್ಕೊಮ್ಮೆ ಒಣ ಕಸ ಸಂಗ್ರಹಣೆ ಮಾಡಲಾಗುತ್ತಿತ್ತು. ಘಟಕದಲ್ಲಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಇದೆಲ್ಲ ಕಾರ್ಯಕ್ಕೂ ಬೀಗ ಬಿದ್ದಿದೆ.
ಸಿಇಒ ಕರೆ ಸ್ವೀಕರಿಸಲ್ಲ! ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಜಿಪಂ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ, ಆದರೆ ತೂಬಗೆರೆ ವ್ಯಾಪ್ತಿಯ ಕಸ ಘಟಕಕ್ಕೆ ಬೀಗ ಬಿದ್ದಿರುವ ಬಗ್ಗೆ ಗಮನ ಸೆಳೆಯಲು ಜಿಪಂ ಸಿಇಒ ಡಾ.ಕೆ.ಎನ್.ಅನುರಾಧಾ ಅವರ ಇಲಾಖೆಯ ಮೊಬೈಲ್ ಸಂಖ್ಯೆಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ ಎಂಬುದು ಸ್ಥಳೀಯರ ದೂರಾಗಿದೆ. ವೇದಿಕೆಗಳಲ್ಲಿ, ಸಭೆ ಸಮಾರಂಭಗಳಲ್ಲಿ ಸ್ವಚ್ಛತೆ ಬಗ್ಗೆ ಪಾಠ ಮಾಡುವ ಹಿರಿಯ ಅಧಿಕಾರಿಗಳು ಜನರ ದೂರು ಕೇಳಲು ಸಿದ್ದರಿಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ.
ಕಸ ಘಟಕ ನಿರ್ವಹಣೆಯಲ್ಲಿ ಪಂಚಾಯಿತಿ ನಿರ್ಲಕ್ಷ್ಯ ಅಡಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಆದರೆ ಸಿಬ್ಬಂದಿ ಕೊರತೆಯಿಂದ ಘಟಕ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಪಂಚಾಯಿತಿ ಅಧಿಕಾರಿಗಳು ಹೇಳುತ್ತಿದ್ದಾರೆ. ಒಟ್ಟಾರೆ ಲಕ್ಷಾಂತರ ರೂ.ಖರ್ಚು ಮಾಡಿ ನಿರ್ಮಾಣ ಮಾಡಲಾದ ಕಸ ಘಟಕದ ಕಟ್ಟಡ ಕೊಂಪೆಯಂತಾಗಿದ್ದು ಶಿಥಿಲಗೊಳ್ಳುತ್ತಿದೆ.
ಉಸ್ತುವಾರಿ ಸಚಿವರು ಸಿಗಲ್ಲ: ದೊಡ್ಡಬಳ್ಳಾಪುರ ತಾಲೂಕು ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ತೂಬಗೆರೆ ಅತಂತ್ರ ಸ್ಥಿತಿಯಲ್ಲಿದೆ. ಉಸ್ತುವಾರಿ ಸಚಿವರು ಜನರ ಕೈಗೆ ಸುಲಭವಾಗಿ ಸಿಗುವುದಿಲ್ಲ ಎಂಬುದು ಗೊತ್ತಿರುವ ಸತ್ಯವಾಗಿದೆ. ಅವರ ಗಮನಕ್ಕೆ ತರಲು ಏನೆಲ್ಲ ಕಸರತ್ತು ನಡೆಸಿದರೂ ಎಲ್ಲವೂ ವ್ಯರ್ಥ, ಅವರನ್ನು ಭೇಟಿ ಮಾಡಲೂ ಸಾಧ್ಯವಾಗುತ್ತಿಲ್ಲ. ಇನ್ನು ಕರೆ ಮಾಡಿದರೆ ಕರೆ ಸ್ವೀಕರಿಸಿರುವುದು ಕನಸಿನ ಮಾತಾಗಿದೆ ಎಂದು ಸ್ಥಳೀಯರು ಅಲವತ್ತುಗೊಂಡಿದ್ದಾರೆ.
ಕಸದ ಘಟಕಕ್ಕೆ ಪ್ರಸ್ತುತ ಬೀಗ ಹಾಕಲಾಗಿದೆ, ಸಿಬ್ಬಂದಿ ಕೊರತೆಯಿಂದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಮುಂದಿನ ಪಂಚಾಯಿತಿ ಸಭೆಯಲ್ಲಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು.
ವೆಂಕಟೇಶ್, ಪಿಡಿಒ ತೂಬಗೆರೆ ಪಂಚಾಯಿತಿ
ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಿ ಕಟ್ಟಡಗಳು ಇಂಥ ಸ್ಥಿತಿ ತಲುಪುತ್ತಿವೆ, ಕಸ ಘಟಕವನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ. ಕಾರ್ಯಾರಂಭಗೊಂಡ ಕೆಲವೇ ತಿಂಗಳಲ್ಲಿ ಕಟ್ಟಡಕ್ಕೆ ಬೀಗ ಬಿದ್ದಿದೆ. ಇದಕ್ಕೆ ಅಧಿಕಾರಿಗಳೇ ನೇರ ಹೊಣೆ.
ಕೃಷ್ಣಪ್ಪ, ಪಂಚಾಯಿತಿ ಸದಸ್ಯ