ನಂಜನಗೂಡು: ನಂಜನಗೂಡು ಕೈಗಾರಿಕಾ ವಲಯ ಪ್ರದೇಶದ 5 ಮಂದಿಯಲ್ಲಿ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ನಂಜನಗೂಡು ಅಪಾಯಕಾರಿ ಪ್ರದೇಶ ಎಂದು ಜಿಲ್ಲಾಧಿಕಾರಿ ಘೋಷಿಸಿದ್ದಾರೆ.
ಇಡೀ ಪಟ್ಟಣವನ್ನು ಲಾಕ್ಡೌನ್ ಮಾಡಲಾಗಿದೆ. ನಂಜನಗೂಡಿನ ಹೊರಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಸೋಂಕು ಪತ್ತೆಯಾದ ನಂಜನಗೂಡು ಕೈಗಾರಿಕಾ ಪ್ರದೇಶಕ್ಕೆ ಯಾರು ಪ್ರವೇಶ ಮಾಡದಂತೆ ತಡೆಯಲಾಗಿದೆ.
ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 28 ಮಂದಿಯನ್ನು ಪ್ರತ್ಯೇಕಗೊಳಿಸಿ ಕ್ವಾರಂಟೈನ್ನಲ್ಲಿ ಇಡಲಾಗಿದೆ ಎಂದು ಚಾಮರಾಜನಗರ ಜಿಲ್ಲಾ ವೈದ್ಯರು ತಿಳಿಸಿದ್ದಾರೆ.
ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯ ಸಿಬ್ಬಂದಿಗೆ ಸೋಂಕು ಹರಡಿತ್ತು. ಇವರನ್ನು ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಿದ್ದರು. ಸೂಚನೆ ಉಲ್ಲಂಘಿಸಿ ಆತ 5 ಮಂದಿಗೆ ಸೋಂಕು ಹರಡಿದ್ದಾನೆ ಎಂದು ತಿಳಿದು ಬಂದಿದೆ.
ಕರೊನಾ ವೈರಸ್ ಸೋಂಕು ದೃಢಪಟ್ಟಿರುವವರೊಂದಿಗೆ ಸಂಪರ್ಕ ಹೊಂದಿರುವ ಎಲ್ಲರನ್ನು ಶೋಧ ಮಾಡಲಾಗುತ್ತಿದೆ. ಅವರನ್ನು ಪತ್ತೆ ಮಾಡಿ ಚಿಕಿತ್ಸೆಗೆ ಒಳಪಡಿಸಲಾಗುವುದು ಎಂದು ಚಾಮರಾಜನಗರ ಜಿಲ್ಲಾ ಆರೋಗ್ಯ ಅಧಿಕಾರಿ ರವಿ ತಿಳಿಸಿದ್ದಾರೆ.(ದಿಗ್ವಿಜಯ ನ್ಯೂಸ್)