

ಮಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಯಾವುದೇ ಖಾಸಗಿ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾದ್ಯಂತ ರಸ್ತೆಗಳಲ್ಲಿ ವಾಹನ ಸಂಚಾರ ಅತಿ ವಿರಳವಾಗಿತ್ತು. ಕೆಲವೆಡೆ ವಾಹನಗಳು ರಸ್ತೆಗಿಳಿದಿದ್ದು, ಪೊಲೀಸರು ತಪಾಸಣೆ ಮಾಡಿ ಅನವಶ್ಯವಾಗಿ ತಿರುಗಾಡಿದವರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಮಂಗಳೂರು ನಗರದಲ್ಲಿ ಕ್ಲಾಕ್ ಟವರ್, ಲಾಲ್‌ಭಾಗ್, ಅಂಬೇಡ್ಕರ್ ವೃತ್ತ ಮೊದಲಾದ ಕಡೆ ಬ್ಯಾರಿಕೇಡ್ ಇಟ್ಟು ಒಂದು ರಸ್ತೆ ಸಂಪೂರ್ಣ ಬ್ಲಾಕ್ ಮಾಡಿದ್ದಾರೆ. ತುರ್ತು ವಾಹನಗಳು ಒಂದು ರಸ್ತೆಯಲ್ಲಿ ಮಾತ್ರ ಹೋಗಲು, ಬರಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಅನವಶ್ಯಕವಾಗಿ ತಿರುಗಾಡುತ್ತಿದ್ದವರಿಗೆ ಬ್ರೇಕ್ ಬಿದ್ದಿದೆ. ಬಹುತೇಕ ಮಂದಿ ಶುಕ್ರವಾರ ಅವಶ್ಯ ಸಾಮಗ್ರಿ ಖರೀದಿಸಿ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.
ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ತನಕ ತರಕಾರಿ ಹಾಗೂ ದಿನಸಿ ಅಂಗಡಿಗಳು ತೆರೆದಿದ್ದು, ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಮೆಡಿಕಲ್ ಸ್ಟೋರ್‌ಗಳಲ್ಲೂ ಜನಸಂದಣಿ ಕಂಡುಬರಲಿಲ್ಲ. ಸ್ಟೇಟ್‌ಬ್ಯಾಂಕ್ ಹಾಗೂ ಇತರ ಕಡೆ ಬೀದಿ ಬದಿ ತರಕಾರಿ, ಹಣ್ಣು ವ್ಯಾಪಾರ ಜೋರಾಗಿ ನಡೆಯಿತು. ಸೂಪರ್, ಹೈಪರ್ ಮಾರುಕಟ್ಟೆಗಳಲ್ಲೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು.
ಪಾಸ್ ಇದ್ದವರಿಗಷ್ಟೇ ಅವಕಾಶ: ಮಂಗಳೂರು ನಗರದಲ್ಲಿ ತುರ್ತು ಪಾಸ್ ಪಡೆದವರಿಗೆ, ವೈದ್ಯರು, ದಾದಿಯರು, ಬ್ಯಾಂಕ್ ಸಿಬ್ಬಂದಿ, ಮಾಧ್ಯಮದ ಪ್ರತಿನಿಧಿಗಳಿಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಂದರ್‌ನಿಂದ ಸರಕು ಸಾಗಾಟದ ಲಾರಿಗಳು ಯಾವುದೇ ಅಡೆತಡೆ ಇಲ್ಲದೆ ಸಂಚರಿಸಿದವು.
ಸೆಂಟ್ರಲ್ ಮಾರುಕಟ್ಟೆ ಸ್ತಬ್ಧ
ಜಿಲ್ಲಾಡಳಿತ ಆದೇಶ ಹಿನ್ನೆಲೆಯಲ್ಲಿ ಸೆಂಟ್ರಲ್ ಮಾರುಕಟ್ಟೆ ಶುಕ್ರವಾರವೂ ಸ್ತಬ್ಧವಾಗಿತ್ತು. ಮಾರುಕಟ್ಟೆ ವ್ಯಾಪಾರಿಗಳನ್ನು ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರವಾಗುವಂತೆ ನೀಡಿದ ಆದೇಶಕ್ಕೆ ವ್ಯಾಪಾರಿಗಳು ಸ್ಪಂದನೆ ನೀಡಿಲ್ಲ. ಮಾರುಕಟ್ಟೆ ಹೊರಭಾಗದ ಕೆಲವು ಮುಖ್ಯ ರಸ್ತೆಗಳಲ್ಲಿ ವ್ಯಾಪಾರಿಗಳು ಹಣ್ಣು, ತರಕಾರಿ ಮಾರಾಟ ಮಾಡಿದರು. ಒಳರಸ್ತೆಗಳಲ್ಲಿ ಟೆಂಪೋಗಳಲ್ಲಿ ಮನೆಗಳ ಎದುರಿಗೆ ತರಕಾರಿ ಕೊಂಡೊಯ್ದು ಮಾರಾಟ ಮಾಡಿದರು. ಸ್ಟೇಟ್‌ಬ್ಯಾಂಕ್ ಮೀನು ಮಾರುಕಟ್ಟೆಯಲ್ಲಿ ಕೆಲವು ವ್ಯಾಪಾರಿಗಳು ಮೀನು ಮಾರಾಟ ಮಾಡಿದ್ದಾರೆ. ಆದರೆ ಗ್ರಾಹಕರ ಸಂಖ್ಯೆ ವಿರಳವಾಗಿತ್ತು.