

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಹರಡುವುದನ್ನು ತಪ್ಪಿಸುವುದಕ್ಕಾಗಿ ಭಾನುವಾರದ ಜನತಾ ಕರ್ಫ್ಯೂ ಮಾದರಿಯಲ್ಲೇ ಮಾ.31ರ ವರೆಗೂ ‘ಲಾಕ್‌ಡೌನ್’ ಮುಂದುವರಿಸಲಾಗುವುದು. ಅದರ ಹಿಂದಿರುವ ಉದ್ದೇಶ ಅರ್ಥೈಸಿಕೊಂಡು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಹೇಳಿದ್ದಾರೆ.
ಭಾನುವಾರ ಜಿಲ್ಲೆಯಲ್ಲಿ ಜನತಾ ಕರ್ಫ್ಯೂ ಯಶಸ್ಸಿಗೆ ಜನತೆ ಕೈಜೋಡಿಸಿದ್ದಾರೆ. ಅದೇ ರೀತಿ ಮುಂದಿನ 31ರವರೆಗೂ ಸಹಕಾರ ಬೇಕಿದೆ. ಇದೊಂದು ಕ್ಷಿಪ್ರವಾಗಿ ಹರಡುತ್ತಿರುವ ವೈರಸ್ ಆಗಿರುವ ಕಾರಣ ಜನತೆ ಮನೆಯಲ್ಲೇ ಉಳಿದಷ್ಟೂ ಪ್ರಯೋಜನವಾಗಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ನೆರೆ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಕರೊನಾ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೂ ನಿರ್ಬಂಧ ಮುಂದುವರಿಯಲಿದೆ. ಜಿಲ್ಲೆಯಲ್ಲಿ ಸಾರ್ವಜನಿಕರು ಮುಕ್ತವಾಗಿ ಬೆರೆಯುವುದನ್ನು ಅನಿವಾರ್ಯವಾಗಿ ತಡೆಯಬೇಕಾದ ಅವಶ್ಯಕತೆ ಇದೆ. ತಡೆಗಟ್ಟಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಏನೇನು ನಿರ್ಬಂಧ?
ಸಾರ್ವಜನಿಕ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಾರ್ಚ್ 22ರ ರಾತ್ರಿ 9 ಗಂಟೆಯಿಂದ ಮಾರ್ಚ್ 31 ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ತುರ್ತು ಮತ್ತು ಅವಶ್ಯಕ ಕಾರ್ಯಗಳನ್ನು ಹೊರತುಪಡಿಸಿ ಯಾವುದೇ ಕಾರಣಗಳಿಗೆ ವಸತಿ ಸಮುಚ್ಚಯದ ಹೊರಬರುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
ಸಾರ್ವಜನಿಕರು ತಮ್ಮ ಮನೆಯಲ್ಲಿ ಜನ ಸೇರುವಂತಹ ಕಾರ್ಯಕ್ರಮ ಮಾಡುವಂತಿಲ್ಲ. ಜನಜಂಗುಳಿ ಸೇರಿದಂತೆ ಎಲ್ಲ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ ಉತ್ಸವ ಜಾತ್ರೆ ನಿಷೇಧಿಸಲಾಗಿದೆ. ಎಲ್ಲ ಅಂಗಡಿಗಳು, ವಾಣಿಜ್ಯ ಸಂಕೀರ್ಣ, ವರ್ಕ್‌ಶಾಪ್, ಅವಶ್ಯಕವಲ್ಲದ ಸೇವೆಗಳನ್ನು ನಿರ್ವಹಿಸುವ ಗೋದಾಮುಗಳನ್ನು ಮುಚ್ಚಬೇಕು.
ಕಾರ್ಮಿಕರ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಕೈಗಾರಿಕೆಗಳು ಶೇ.50ರಷ್ಟು ಬಲದಲ್ಲಿರುವ ಆಧಾರದಲ್ಲಿ ಕೆಲಸ ನಿರ್ವಹಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಖಚಿತ ಪಡಿಸಬೇಕು.
ಬಸ್ ಬಂದ್, ಆಟೋಗೆ ರಿಯಾಯಿತಿ:
ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಸಾರಿಗೆ ಸಂಸ್ಥೆಯ ಬಸ್ ಸಂಚಾರವನ್ನು ಸ್ಥಗಿತಗೊಳಿಸಬೇಕು. ಅಂತರ್‌ರಾಜ್ಯ ಮತ್ತು ಅಂತರ್ ಜಿಲ್ಲೆ ಸಾರಿಗೆ ಸಂಚಾರ ಸೇವೆಗಳು ಕಾರ್ಯಾಚರಿಸುವಂತೆ ಇಲ್ಲ.
ದೇವಸ್ಥಾನ, ಮಸೀದಿ, ಇಗರ್ಜಿ ಒಳಗೊಂಡಂತೆ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕರು ಗುಂಪಾಗಿ ಪ್ರವೇಶಿಸಬಾರದು. ಬೇಸಿಗೆ ಶಿಬಿರ ಸಮಾರಂಭ ವಿಚಾರಸಂಕಿರಣ ವಸ್ತು ಪ್ರದರ್ಶನ ಸಂಗೀತ ಕ್ರೀಡಾ ಚಟುವಟಿಕೆ ಇತ್ಯಾದಿ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ. ಬೀಚ್‌ಗಳು, ಪ್ರವಾಸಿತಾಣಗಳಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ವೈಯಕ್ತಿಕ ಕಾರಣಗಳಿಗಾಗಿ ಅನುಮತಿ ಕೋರಿ ಮನವಿ ಸಲ್ಲಿಸಲು ಯಾವುದೇ ಕಾರಣಕ್ಕೂ ಅವಕಾಶವಿರುವುದಿಲ್ಲ ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.
ಯಾವುದಕ್ಕೆ ನಿರ್ಬಂಧ ಇಲ್ಲ
*ಪಡಿತರ ಅಂಗಡಿ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣಿನ ಮಾರುಕಟ್ಟೆ ಮತ್ತು ಅಂಗಡಿಗಳು, ಎಲ್ಲ ಸರಕು ಸಾಗಾಣಿಕೆ.
*ಪೊಲೀಸ್ ಮತ್ತು ಅಗ್ನಿಶಾಮಕ ಸೇವೆ.
*ಎಲ್ಲ ಸರ್ಕಾರಿ ಕಚೇರಿಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ರಾಜ್ ಸಂಸ್ಥೆ ಕಚೇರಿಗಳು.
*ಅಂಚೆ ಸೇವೆ, ವಿದ್ಯುಚ್ಛಕ್ತಿ, ನೀರು ಮತ್ತು ಪೌರ ಸೇವೆ.
*ಬ್ಯಾಂಕ್, ಎಟಿಎಂ.
*ದೂರವಾಣಿ, ಇಂಟರ್ನೆಟ್.
*ಆಹಾರ ಪದಾರ್ಥಗಳ ಹೋಂ ಡೆಲಿವರಿ.
*ರೆಸ್ಟೋರೆಂಟ್‌ಗಳಿಂದ ಆಹಾರ ಕೊಂಡೊಯ್ಯುವುದು.
*ಔಷಧ, ವೈದ್ಯಕೀಯ ಸಲಕರಣೆ.
*ಕೃಷಿ, ರೇಷ್ಮೆ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಇವುಗಳಿಗೆ ಸಂಬಂಧಿಸಿದ ಅಂಗಡಿ ಮತ್ತು ಮಾರುಕಟ್ಟೆಗಳು.
*ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಒದಗಿಸಲಾಗುವ ಕ್ಯಾಂಟೀನ್ ಸೇವೆಗಳು.
ಖಾಸಗಿ ಬಸ್ ಸಂಚಾರ ಸ್ಥಗಿತ
ಕರೊನಾ ವೈರಸ್ ಮಂಗಳೂರಿಗೆ ಹಬ್ಬಿರುವ ಮತ್ತು ರಾಜ್ಯದ 9 ಜಿಲ್ಲೆಗಳಲ್ಲಿ ಶಟ್‌ಡೌನ್ ಕಾರಣ ಮಾ.31ರವರೆಗೆ ದ.ಕ.ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ದ.ಕ.ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ. ಜಿಲ್ಲಾಡಳಿತ ಸೂಚನೆ ಮೇರೆಗೆ ಈ ಕ್ರಮ ಜರುಗಿಸಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಬಸ್ ಸಂಚಾರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.